ಕಾಶ್ಮೀರದ ಮೊದಲ ಮುಸ್ಲಿಂ ಮಹಿಳಾ ಪೈಲಟ್ ಬಗ್ಗೆ ಗೊತ್ತೇ ?
ಶ್ರೀನಗರ, ಆ. 31: ಇರಾಮ್ ಹಬೀಬ್ (30) ಮೊಟ್ಟಮೊದಲ ಕಾಶ್ಮೀರಿ ಮುಸ್ಲಿಂ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂದಿನ ತಿಂಗಳು ಹಬೀಬ್ ಖಾಸಗಿ ಏರ್ಲೈನ್ಸ್ ಕಂಪನಿ ಸೇರುತ್ತಿದ್ದಾರೆ.
2016ರಲ್ಲಿ ಏರ್ಇಂಡಿಯಾ ಸೇರಿದ್ದ ಕಾಶ್ಮೀರಿ ಪಂಡಿತ ಕುಟುಂಬದ ತನ್ವಿ ರೈನಾ, ಈ ಕಣಿವೆ ರಾಜ್ಯದ ಮೊಟ್ಟಮೊದಲ ಮಹಿಳಾ ಪೈಲಟ್ ಎನಿಸಿಕೊಂಡಿ ದ್ದರು. ಕಳೆದ ವರ್ಷದ ಏಪ್ರಿಲ್ನಲ್ಲಿ 21 ವರ್ಷದ ಕಾಶ್ಮೀರಿ ಯುವತಿ ಆಯಿಷಾ ಅಝೀಝ್ ದೇಶದ ಅತ್ಯಂತ ಕಿರಿಯ ಪೈಲಟ್ ವಿದ್ಯಾರ್ಥಿನಿ ಎನಿಸಿಕೊಂಡಿದ್ದರು. ಸಂಪ್ರದಾಯಸ್ಥ ಕಾಶ್ಮೀರಿ ಮುಸ್ಲಿಂ ಸಮಾಜದ ಹಿನ್ನೆಲೆಯಿಂದ ಬಂದ ಇರಾಮ್ ಅವರ ವಿಮಾನಯಾನ ಹಾದಿ ಸುಗಮವೇನೂ ಆಗಿರಲಿಲ್ಲ.
ಹಬೀಬ್ ತಂದೆ ಸರ್ಕಾರಿ ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ಪರಿಕರಗಳ ಪೂರೈಕೆದಾರರು. ಪೈಲಟ್ ಆಗಬೇಕು ಎಂಬ ಬಾಲ್ಯದ ಕನಸು ನನಸಾಗಿಸುವ ನಿಟ್ಟಿನಲ್ಲಿ ಇರಾಮ್, ಅರಣ್ಯಗಾರಿಕೆಯಲ್ಲಿ ಡಾಕ್ಟರೇಟ್ ಪದವಿ ಅಧ್ಯಯನವನ್ನೂ ಕೈಬಿಟ್ಟಿದ್ದಾರೆ.
ಇರಾಮ್ ಇದೀಗ ದೆಹಲಿಯಲ್ಲಿ ವಾಣಿಜ್ಯ ವಿಮಾನದ ಪೈಲಟ್ ಲೈಸನ್ಸ್ ಪಡೆಯಲು ತರಬೇತಿಯಲ್ಲಿದ್ದಾರೆ. 2016ರಲ್ಲಿ ಅಮೆರಿಕದ ಮಿಯಾಮಿಯಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. "ಕಾಶ್ಮೀರಿ ಮುಸ್ಲಿಂ ಮಹಿಳೆಯಾಗಿ ನಾನು ವಿಮಾನಯಾನ ಕ್ಷೇತ್ರ ಆಯ್ಕೆ ಮಾಡಿಕೊಂಡ ಬಗ್ಗೆ ಪ್ರತಿಯೊಬ್ಬರೂ ಅಚ್ಚರಿಪಟ್ಟಿದ್ದರು. ಆದರೆ ನಾನು ಈ ಕ್ಷೇತ್ರದಲ್ಲಿ ಮುನ್ನಡೆದು ನನ್ನ ಗುರಿ ಸಾಧಿಸಿಕೊಂಡಿದ್ದೇನೆ" ಎಂದು ಹಬೀಬ್ ಸಂತಸ ಹಂಚಿಕೊಂಡಿದ್ದಾರೆ.