---

ಕೊಡಗಿನ ಪುನರ್ ನಿರ್ಮಾಣಕ್ಕೆ ಕರುನಾಡ ಜನರ ಕರುಣೆಯೊಂದೇ ದಾರಿ

ಕೊಡುವ ಕೈಗಳಿಗಾಗಿ ಕಾಯುತ್ತಿರುವ ಕೊಡಗು

#ಕೊಚ್ಚಿಹೋದ ಕೊಡಗು: ವಿಶೇಷ ವರದಿ ಸರಣಿ

►10 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರು

ಮಡಿಕೇರಿ: ಕರ್ನಾಟಕದ ಸ್ವಿಟ್ಝರ್ಲೆಂಡ್ ಎಂದೇ ಬಿರುದಾಂಕಿತ ಕೊಡಗು ಜಿಲ್ಲೆ ಹಿಂದೆಂದೂ ಕಂಡರಿಯದ ಮಹಾ ಮಳೆ, ಭೂಕುಸಿತಕ್ಕೆ ತುತ್ತಾಗಿ ತತ್ತರಿಸಿಹೋಗಿದೆ. ಇಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು ಹತ್ತಾರು ಮಂದಿ ಸಾವಿಗೆ ತುತ್ತಾಗಿದ್ದಾರೆ. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ತಮ್ಮ ಬದುಕು ಕಳೆದುಕೊಂಡು ನಿರ್ಗತಿಕರಾಗಿ ಬದುಕಿದ್ದೂ ಸತ್ತಂತಿದ್ದಾರೆ. ಮುಂದಿನ ಜೀವನದ ಬಗ್ಗೆ ನೆನೆದು ನಿರಾಶ್ರಿತರ ಶಿಬಿರಗಳಲ್ಲಿ ಕಣ್ಣೀರು ಹರಿಯುತ್ತಿದ್ದು ಕೊಡುವ ಕೈಗಳಿಗಾಗಿ ಕಾಯುತ್ತಿದ್ದಾರೆ.

ನಿರಾಶ್ರಿತರಿಗೆ ರಾಜ್ಯದ ಮೂಲೆ ಮೂಲೆಯಿಂದ ಸಮರೋಪಾದಿಯಲ್ಲಿ ಮಾನವೀಯ ನೆರವು ಹರಿದು ಬಂದಿದ್ದು ಅದರ ಫಲವಾಗಿ ಶಿಬಿರಗಳಲ್ಲಿರುವವರು ಹೊಟ್ಟೆ ತುಂಬಾ ತಿನ್ನುತ್ತಿದ್ದಾರೆ, ಧರಿಸುತ್ತಿದ್ದಾರೆ. ಜೈಲಿನಲ್ಲಿ ಕೊಳೆಯುತ್ತಿರುವ ಕೈದಿಗಳಿಂದ ಹಿಡಿದು ತೃತೀಯ ಲಿಂಗಿಗಳವರೆಗೆ, ಕಾಡು ವಾಸಿಗಳಿಂದ ಹಿಡಿದು ಸರ್ವೊಚ್ಚ ನ್ಯಾಯಾಲಯದ ನ್ಯಾಯಮೂರ್ತಿವರೆಗೆ ಕೊಡಗಿನ ಸಂತ್ರಸ್ತ ಜನರಿಗೆ ನೆರವಾಗುವುದರೊಂದಿಗೆ ಧೈರ್ಯ ತುಂಬಿರುವುದು ಹಾಗೂ ಸ್ಥಳೀಯರ ಸಹಾಯ, ಸಹಕಾರ ಸಂತ್ರಸ್ತರನ್ನು ಒಂದಷ್ಟು ದಿನ ಸಮಾಧಾನಪಡಿಸಿದೆ. ಆದರೆ ಶಿಬಿರದಲ್ಲಿ ದಿನ ದೂಡುತ್ತಿದ್ದಂತೆ ತಮ್ಮ ಮುಂದಿನ ಜೀವನದ ಬಗ್ಗೆ ಅವರಲ್ಲಿ ಭೀತಿ ಮೂಡಿದೆ. ಅದಕ್ಕಾಗಿ ಅವರು ಪ್ರತಿಯೊಬ್ಬರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸರಕಾರ ಕೂಡಾ ಜನರ ಸಹಕಾರ ನಿರೀಕ್ಷಿಸುತ್ತಿದೆ. ಕೊಡಗಿನ ಸ್ಥಿತಿಯನ್ನು ಓದಿ, ಕೇಳಿ ತಿಳಿಯುವುದಕ್ಕಿಂತ ಹೆಚ್ಚು ನೋಡಿ ತಿಳಿದರೆ ಅಲ್ಲಿನ ಭೀಕರತೆ ಅರಿವಾಗುತ್ತಿದೆ. ಮಡಿಕೇರಿ ತಾಲೂಕಿನಾದ್ಯಂತ ಬೆಟ್ಟಗುಡ್ಡಗಳು ಉರುಳಿ ಹಲವು ಗ್ರಾಮಗಳು ಕಣ್ಮರೆಯಾಗಿವೆ. ಹತ್ತಾರು ಗ್ರಾಮಗಳು ಹೊರಗಿನ ಸಂಪರ್ಕವನ್ನು ಕಳೆದುಕೊಂಡಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೆವರು ಸುರಿಸಿ ಬೆಳೆಸಿದ ಸಾವಿರಾರು ಎಕರೆ ಫಲವತ್ತಾದ ತೋಟಗಳು ನಾಶವಾಗಿವೆ. ಸಾವಿರದಷ್ಟು ಮನೆಗಳು ನಾಶ, ಹಾನಿಯಾಗಿದ್ದು ಅಷ್ಟೇ ಸಂಖ್ಯೆಯ ಕುಟುಂಬಗಳು ನಿರ್ಗತಿಕರಾಗಿ ಶಾಲೆ, ಮದ್ರಸ, ಹಳೆ ಜೈಲು, ಸಮುದಾಯ ಭವನಗಳಲ್ಲಿ ಆಶ್ರಯ ಪಡೆದಿದ್ದು ತಮ್ಮ ಭವಿಷದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆ ನಿಂತಿಲ್ಲ. ಮಳೆಗಿಂತಲೂ ಕೊಡಗಿನಲ್ಲಿ ಬೀಸುತ್ತಿರುವ ಶೀತಗಾಳಿ, ಮೈ ಕೊರೆಯುವ ಚಳಿ ಇಲ್ಲಿನ ಜನರನ್ನು ಕಂಗೆಡಿಸಿದೆ. ಇರುವ ವ್ಯವಸ್ಥೆಯಲ್ಲಿ ಚಳಿಗೆ ಮೈಯೊಡ್ಡಿ ಇರಬೇಕಾದ ಪರಿಸ್ಥಿತಿ ನಿರಾಶ್ರಿತರದ್ದಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ದುರಂತದ ಅರಿವಿಲ್ಲದ ಸಣ್ಣ ಪುಟ್ಟ ಮಕ್ಕಳು ‘‘ನಾವೇಕೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಮನೆಗೆ ಹೋಗುವ’’ ಎನ್ನುವ ಮಾತುಗಳು ಕಣ್ಣೀರು ಬರಿಸುತ್ತವೆ. ಪ್ರತಿಯೊಂದು ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಒಬ್ಬರ ಸ್ಥಿತಿಗಿಂತ ಮತ್ತೊಬ್ಬರ ಸ್ಥಿತಿ ಶೋಚನೀಯ. ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿದ ಇಸ್ರೋ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಈ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದು ತಿಳಿಸಿದೆ. ಇದರಿಂದ ತಮ್ಮ ಮೂಲ ಸ್ಥಾನಕ್ಕೆ ಮರಳಿ ಹೋಗುವುದು ಮಾತು ಕನಸಾಗಿ ಉಳಿದಿದೆ. ನೆರವಾಗಿ ಸಿಕ್ಕಿದ ಬಟ್ಟೆಗಳನ್ನು ಹೊರತುಪಡಿಸಿ ನಿರಾಶ್ರಿತರಿಗೆ ನಮ್ಮದು ಅಂತ ಬೇರೆನೂ ಇಲ್ಲ. ನಾವು ಭೇಟಿ ನೀಡಿದ ಎಲ್ಲಾ ಶಿಬಿರಗಳಲ್ಲೂ ತಿಂಗಳಿಗೆ ಆಗುವಷ್ಟು ಪಡಿತರ ಸಾಮಗ್ರಿಗಳು ಇವೆ. ಒಂದು ವಾರದ ಕೊಡಗು ಪ್ರವಾಸದಲ್ಲಿ ಮೊದಲ ದಿನ ನಾನು ಮತ್ತು ನಮ್ಮ ಛಾಯಾಗ್ರಾಹಕ ಆಝಾದ್ ಕಂಡಿಗ ಸುಳ್ಯದ ತೆಕ್ಕಿಲ್ ಸಮುದಾಯ ಭವನದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದೆವು. ಅಂದು ರಾತ್ರಿ ಅದೇ ಶಿಬಿರದಲ್ಲಿ ತಂಗಿದ್ದೆವು. ನಿರಾಶ್ರಿತರೊಂದಿಗೆ ಕುಶಲೋಪರಿಯಲ್ಲಿ ತೊಡಗಿದಾಗ ‘‘ಊಟ, ತಿಂಡಿ, ಧರಿಸಲು ಬಟ್ಟೆ ಸಹಿತ ನಮಗೆ ಬೇಕಾದ ಸಕಲ ವ್ಯವಸ್ಥೆ ಇಲ್ಲಿದೆ. ಆದರೆ ಇಲ್ಲಿ ಎಷ್ಟು ದಿನ ಇರಲು ಸಾಧ್ಯ? ಇನ್ನು ಕುಟುಂಬದವರ ಮನೆಗೆ ಹೋದರೂ ಅಲ್ಲಿಯೂ ಎಷ್ಟು ದಿನ ಇರಲು ಸಾಧ್ಯ? ನಮ್ಮ ಮಕ್ಕಳ ಭವಿಷ್ಯವನ್ನು ನೆನೆದು ನಿದ್ದೆ ಬರುತ್ತಿಲ್ಲ. ಹಾಗಾಗಿ ತಲೆ ಮೇಲೆ ಕೈಹೊತ್ತು ರಾತ್ರಿ ಕಳೆಯುತ್ತಿದ್ದೇವೆ’’ ಎಂದು ಎರಡನೇ ಮೊಣ್ಣಂಗೇರಿಯ ಕಾರ್ತ್ಯಮಣಿ ಎಂಬ ಮಹಿಳೆ ದುಃಖ ವ್ಯಕ್ತಪಡಿಸುತ್ತಾರೆ. ‘‘ನನಗೀಗ 60 ವರ್ಷ ವಯಸ್ಸು. ನಾನು ಹುಟ್ಟಿದ್ದು ಬೆಳೆದದ್ದು ಜೋಡುಪಾಲದಲ್ಲೇ. ನನ್ನ ಜೀವನಲ್ಲಿ ಎಂದೂ ಕಂಡು ಕೇಳದ ಘಟನೆ ಅದು. ಬೀಸುವ ಗಾಳಿಯ ಜೊತೆ, ಸುರಿಯುತ್ತಿದ್ದ ಧಾರಾಕಾರ ಮಳೆಗೆ ದೊಡ್ಡ ದೊಡ್ಡ ಮರಗಳು ಧರೆಗುರುತ್ತಿದ್ದವು. ಎಲ್ಲೆಲ್ಲೂ ಶಬ್ದ ಕೇಳಿ ಬರುತ್ತಿತ್ತು. ನೀರಿನಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಬರುತ್ತಿದ್ದವು. ರಭಸದಿಂದ ಹರಿದು ಬರುತ್ತಿದ್ದ ನೀರಿಗೆ ಕೈಮುಗಿದು ‘‘ನಿಲ್ಲು ನಿಲ್ಲು’’ ಎಂದು ಬೇಡಿಕೊಂಡೆ. ಆದರೆ ಅದು ಎಲ್ಲಿ ನಿಲ್ಲುತ್ತೆ. ನನ್ನ ಕಣ್ಣೆದುರೇ ನಮ್ಮ ಮನೆಗಳು ಜಲಸಮಾಧಿಯಾಯಿತು’’ ಎಂದು ಜೋಡುಪಾಲ ಪೆಲ್ತಡ್ಕದ ವೃದ್ಧೆ ಶೇಸಮ್ಮ ಎಂಬವರು ಕಣ್ಣೀರು ಸುರಿಸಿದರು. ಅಂದು ತಡರಾತ್ರಿ ಶಿಬಿರದಲ್ಲಿದ್ದ 60 ವರ್ಷದ ಎರಡನೇ ಮೊಣ್ಣಂಗೇ ರಿಯ ಅಂಗಾರ ಎಂಬವರು ಹೃದಯಾ ಘಾತದಿಂದ ನಿಧನರಾದರು. ಮನೆ, ಜಮೀನು, ತೋಟ ಕಳೆದುಕೊಂಡ ಬಳಿಕ ನಮ್ಮ ತಂದೆ ತೀವ್ರ ನೊಂದಿದ್ದರು. ಯಾರಲ್ಲೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎಷ್ಟೇ ಹೇಳಿದರೂ ತಂದೆ ಕೇಳುತ್ತಿರಲಿಲ್ಲ. ಖಿನ್ನತೆಗೆ ಒಳಗಾದ ಹಾಗೆ ಇದ್ದರು. ಅಲ್ಲದೆ ಇಲ್ಲಿನ ಅಧಿಕಾರಿಗಳು ನಮ್ಮನ್ನು ನಿರಾಶ್ರಿತರ ಪಟ್ಟಿಗೆ ನೋಂದಣಿ ಮಾಡದಿದ್ದರಿಂದ ತಂದೆ ಇನ್ನಷ್ಟು ನೊಂದಿದ್ದರು. ಈಗ ಅವರು ನಮ್ಮನ್ನು ಅಗಲಿದ್ದಾರೆ ಎಂದು ಅವರ ಹಿರಿಯ ಮಗ ಲಕ್ಷ್ಮಣ ಕಣ್ಣೀರು ಹಾಕಿದರು. ಅಲ್ಲಿಂದ ನಾವು ಸಂಪಾಜೆಯ ಸರಕಾರಿ ಶಾಲೆಯಲ್ಲಿರುವ ಶಿಬಿರಕ್ಕೆ ಭೇಟಿ ನೀಡಿದೆವು. ಶಿಬಿರದಲ್ಲಿದ್ದ ಮೂರನೇ ತರಗತಿಯ ವಿದ್ಯಾರ್ಥಿಯೊಬ್ಬ ಪ್ರಕೃತಿ ವಿಕೋಪದ ಭೀಕರತೆಯನ್ನು ತನ್ನದೇ ಭಾಷೆಯಲ್ಲಿ ವಿವರಿಸುತ್ತಾನೆ. ರಕ್ಷಣೆಗಾಗಿ ನಾವು ಹೆಲಿಕಾಪ್ಟರ್‌ಗಾಗಿ ಕಾದೆವು. ಆದರೆ ಹೆಲಿಕಾಪ್ಟರ್ ಬರಲೇ ಇಲ್ಲ ಎಂದು ಹೇಳಿದರೆ, ಲಿಖಿತ ಎಂಬ 1ನೇ ತರಗತಿಯ ಮಗು, ‘‘ನೀರು ಬರುತ್ತಿದೆ, ಕಲ್ಲು ಬರುತ್ತಿದೆ... ಓಡಿ... ಓಡಿ...’’ ಎಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮನೆ

ೆ ಓಡೋಡಿ ಬಂದರು. ಅಲ್ಲಿಂದ ನಾವು ಹಲವು ದಾರಿಗಳಾಗಿ ಇಲ್ಲಿಗೆ ಬಂದೆವು’’ ಎನ್ನುವ ಮಾತುಗಳಲ್ಲಿ ಭಯ ಎದ್ದು ಕಾಣುತ್ತಿತ್ತು. ‘‘ಒಂದಷ್ಟು ಜಮೀನು ಮಾರಾಟ ಮಾಡಿ ನಿರ್ಮಿಸಿದ ಮನೆ ಸಂಪೂರ್ಣ ನಾಶವಾಗಿದೆ. ಬೆವರು, ಆರೋಗ್ಯವನ್ನು ವ್ಯಯಿಸಿ ಮಾಡಿದ್ದ ಫಲವತ್ತಾದ ತೋಟ, ಜಮೀನುಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದೇವೆ.ಎಲ್ಲರ ಸಹಕಾರದಿಂದ ಇಲ್ಲಿ ಊಟ, ತಿಂಡಿ, ಬಟ್ಟೆಬರೆಗಳು ದೊರೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಸಾಂತ್ವ್ವನ ನೀಡುತ್ತಿದ್ದಾರೆ. ಆದರೆ ನಮಗೊಂದು ಸೂರು ಬೇಕಲ್ಲವೇ? ಆ ಬಗ್ಗೆ ಯಾರಿಂದಲೂ ಭರವಸೆ ಸಿಗುತ್ತಿಲ್ಲ’’ ಎಂದು ಎರಡನೇ ಮೊಣ್ಣಂಗೇರಿಯ ನಿವಾಸಿ ಕೃಷ್ಣಪ್ಪ ದುಃಖದಿಂದ ನುಡಿದರು. ಅಲ್ಲಿಂದ ನಾವು ಮಡಿಕೇರಿಯ ದಾಸವಾಳದ ಕೂರ್ಗ್ ಕಮ್ಯುನಿಟಿ ಹಾಲ್, ಆಝಾದ್ ನಗರದ ಮದ್ರಸ, ಶ್ರೀ ಗೆಜ್ಜೆ ಸಂಗಪ್ಪ ಕಂಚಮ್ಮ ಅನುಭವ ಮಂಟಪ, ಮಡಿಕೇರಿ ಕೋಟೆಯ ಹಳೆ ಜೈಲು, ಕೊಟ್ಟಮುಡಿ ಹಳೆ ಜುಮಾ ಮಸೀದಿಯ ಮದ್ರಸ ಸಹಿತ ಹಲವು ಕಡೆ ಇರುವ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ ಅಲ್ಲಿರುವವರೊಂದಿಗೆ ಮಾತನಾಡಿದೆವು. ಅಲ್ಲಿ ಸಂಕಷ್ಟದಲ್ಲಿರುವ ನಮ್ಮ ಸಹೋದರ, ಸಹೋದರಿಯರು, ತಾಯಂದಿರು, ಪುಟಾಣಿ ಮಕ್ಕಳ ಮಾತುಗಳು ಕಣ್ಣೀರು ಬರಿಸುತ್ತವೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜೀವ ರಕ್ಷಣೆಗೆ ಉಟ್ಟ ಬಟ್ಟೆಯಲ್ಲೇ ಓಡಿ ಬಂದಿದ್ದೇವೆ. ಸಂಘ ಸಂಸ್ಥೆಗಳು, ಜನರ ಸಹಾಯ ಸಹಕಾರದಿಂದ ನಾವು ಬದುಕಿದ್ದೇವೆ. ಹಗಲಿಡೀ ಕಾಫಿ ತೋಟಗಳಲ್ಲಿ ಕೂಲಿ ಮಾಡಿ ಕಟ್ಟಿದ ಮನೆ, ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳ ಮದುವೆಗೆ ಕೂಡಿಟ್ಟಿದ್ದ ಚಿನ್ನಾಭರಣಗಳು ಹಾಗೂ ಆಧಾರ್ ಕಾರ್ಡ್, ಪಡಿತರ ಚೀಟಿ, ಶಾಲಾ ಕಾಲೇಜುಗಳ ಅಂಕಪಟ್ಟಿಗಳ ಸಹಿತ ಪ್ರಮುಖ ಎಲ್ಲಾ ದಾಖಲೆ ಪತ್ರಗಳನ್ನೂ ಕಳೆದುಕೊಂಡಿದ್ದೇವೆ. ನಮ್ಮ ಮುಂದಿನ ಬದುಕು ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ನಾವು ಬದುಕಿದ್ದರೂ ಜೀವಂತವಾಗಿರುವ ಶವದಂತಾಗಿದ್ದೇವೆ ಎಂದು ಶಿಬಿರಗಳಲ್ಲಿರುವ ಸಂತ್ರಸ್ತರು ಅಳಲು ತೋಡಿಕೊಂಡರು. ಅದರಲ್ಲೂ ನಾಪೊಕ್ಲು ಗ್ರಾಮದ ಕೊಟ್ಟಮುಡಿ ಹಳೆ ಜುಮಾ ಮಸೀದಿಯ ಮದ್ರಸದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಗೋಳು ಕೇಳುವವರೇ ಇಲ್ಲವಾಗಿದೆ. ‘‘ಇಲ್ಲಿಗೆ ಯಾವೊಬ್ಬ ಹಿರಿಯ ಅಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಸಂಸದರು ಭೇಟಿ ನೀಡಿಲ್ಲ. ನಮಗೆ ಸಾಂತ್ವ್ವನ ಹೇಳಿಲ್ಲ. ಧೈರ್ಯ ತುಂಬಿಲ್ಲ’’ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ‘‘ಇಲ್ಲಿ 22 ಕುಟುಂಬಗಳ 83 ಮಂದಿ ಇದ್ದು ಎಲ್ಲರೂ ಅಲ್ಪಸಂಖ್ಯಾತರೇ ಆಗಿದ್ದಾರೆ. ಹಾಗಾಗಿ ಅವರನ್ನು ನಿರ್ಲಕ್ಷಿಸಲಾಗಿದೆ’’ ಎಂದು ಸ್ಥಳೀಯ ರಾಜಕೀಯ ಮುಖಂಡ ಹನೀಫ್ ಆರೋಪಿಸಿದ್ದಾರೆ. ಮಹಾ ಮಳೆ, ಜಲಪ್ರಳಯ, ಬೆಟ್ಟಗುಡ್ಡ ಕುಸಿತಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣ ರಾಜ್ಯ, ಕೇಂದ್ರ ಸರಕಾರದಿಂದ ಮಾತ್ರ ಸಾಧ್ಯವಿಲ್ಲ. ಜನಪ್ರತಿನಿಧಿಗಳು ಕೊಡಗಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ಸೇರಿದ ಮಾತ್ರಕ್ಕೆ ಕೊಡಗು ಪುನರ್ ನಿರ್ಮಾಣವೂ ಆಗುವುದಿಲ್ಲ. ಇದಕ್ಕೆ ಪ್ರತಿಯೊಬ್ಬರ ಸಹಾಯ ಸಹಕಾರ ಅತ್ಯಗತ್ಯವಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿರುವ ಮಕ್ಕಳು, ಯುವತಿಯರು, ಮಹಿಳೆಯರು, ವೃದ್ಧರು ಸಹಾಯದ ಕೈಗಳನ್ನು ಕಾಯುತ್ತಿದ್ದಾರೆ. ಕೊಡಗಿನ ಜನರಿಗೆ ಕರುಣೆ ತೋರಿಸುವ ಮೂಲಕ ಇಡೀ ಕರುನಾಡು ಮಿಡಿಯಬೇಕಿದೆ. ಕಂಡವರ ಮೂಲಕ ನೆರವಾಗುವುದಕ್ಕಿಂದ ಜಿಲ್ಲಾಧಿಕಾರಿ, ಮುಖ್ಯಮಂತ್ರಿಯ ಪರಿಹಾರ ನಿಧಿಯ ಮೂಲಕ ನೆರವಾಗುವುದು ಉತ್ತಮವಾಗಿದೆ.

ತತ್ತರಿಸಿದ ಪ್ರವಾಸೋದ್ಯಮ

ಜಿಲ್ಲೆಯ ಹೆಚ್ಚಿನ ಜನರು ತಮ್ಮ ಹಾಗೂ ಕುಟುಂಬದ ಜೀವನದ ಬಂಡಿ ಸಾಗಿಸಲು ಪ್ರವಾಸೋದ್ಯಮವನ್ನು ಅವಲಂಬಿಸಿದ್ದಾರೆ. ಪ್ರಸಕ್ತ ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಪ್ರವಾಸಿಗರೇ ಇಲ್ಲದೆ ಇಲ್ಲಿನ ಪ್ರಮುಖ ಉದ್ಯಮವಾದ ಹೊಟೇಲ್, ಸ್ಪೈಸ್ (ಸಂಬಾರು ಪದಾರ್ಥ), ಜೇನು ಮೊದಲಾದ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಆಟೊ, ಜೀಪು ಸಹಿತ ಟ್ಯಾಕ್ಸಿ ಚಾಲಕರು ಕಂಗಾಲಾಗಿದ್ದಾರೆ. ಮಳೆಯಿಂದ ಬೆಳೆಗಳು ಹಾನಿಗೊಂಡಿರುವುದರಿಂದ ಕೆಲಸವಿಲ್ಲದೆ ತೋಟ ಕಾರ್ಮಿಕರ ಸ್ಥಿತಿ ಅತಂತ್ರವಾಗಿದ್ದು ಬದುಕಿಗಾಗಿ ಪರದಾಡುತ್ತಿದ್ದಾರೆ.

ನೆಲಕಚ್ಚಿದ ಕೃಷಿ: ಬೆಳೆಗಾರ ಕಂಗಾಲು

ಮನೆಮಾರು ಕಳೆದುಕೊಂಡು ನಿರಾಶ್ರಿತರ ಶಿಬಿರ ಸೇರಿದ ಸಂತ್ರಸ್ತರ ಗೋಳು ಒಂದೆಡೆಯಾದರೆ ಇನ್ನು ತೋಟಗಾರಿಕೆ, ಕೃಷಿಯನ್ನೇ ನಂಬಿರುವ ಕೊಡಗಿನ ಜನರ ಗೋಳು ಬೇರೆಯೇ ಆಗಿದೆ. ವಿಪರೀತ ಮಳೆಯಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ, ಕರಿಮೆಣಸು, ಕೋಕೊ, ಭತ್ತ ಸಹಿತ ಸಂಬಾರ ಪದಾರ್ಥಗಳ ಪ್ರಮುಖ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಕೃಷಿಕರು, ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಜಿಲ್ಲೆಯ ಕೆಲವು ತೋಟಗಳಿಗೆ ಭೇಟಿ ನೀಡಿದಾಗ ಕರಿಮೆಣಸು, ಕಾಫಿ ಬೀಜಗಳು ನೆರಕುರುಳಿರುವುದನ್ನು ತೋರಿಸಿ ಬೆಳೆಗಾರರು ತಮ್ಮ ಸಂಕಷ್ಟಗಳನ್ನು ಹೇಳಿದರು. ಸರಕಾರದ ವರದಿ ಪ್ರಕಾರ ಜಿಲ್ಲೆಯಲ್ಲಿ ಎರಡೂವರೇ ಸಾವಿರ ಕೋಟಿ ರೂ.ಗೂ ಅಧಿಕ ಬೆಳೆ ನಾಶವಾಗಿದೆ. ‘‘ತೋಟದ ಕೆಲಸಕ್ಕೆ ಕಾರ್ಮಿರರೇ ಸಿಗುತ್ತಿಲ್ಲ. ಸಿಗುವ ಕಾರ್ಮಿಕರಿಗೆ ದುಪ್ಪಟ್ಟು ವೇತನ ನೀಡಿ ತೋಟದ ಕೆಲಸ ಮಾಡಲಾಗಿದೆ. ಸಾಲ ಮಾಡಿ ಬೆಳೆದ ಬೆಳೆಗಳು ಇನ್ನೇನು ಫಲ ಕೊಡುವಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ನೆಲಕಚ್ಚಿದ್ದು ಗಾಯದ ಮೇರೆ ಬರೆ ಎಳೆದಂತೆ ಆಗಿದೆ’’ ಎಂದು ಅಳುತ್ತಿದ್ದಾರೆ ಕೊಡಗು ಜಿಲ್ಲೆಯ ಬೆಳೆಗಾರರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top