ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ ಮಗ !
ಬರ್ವಾನಿ (ಮಧ್ಯಪ್ರದೇಶ): 45 ವರ್ಷದ ತಾಯಿಯ ಮೇಲೆಯೇ 30 ವರ್ಷದ ಮಗ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಜಿಲ್ಲೆಯ ಸುರಾನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಈ ಘಟನೆ ಸೆಪ್ಟೆಂಬರ್ 2ರಂದು ನಡೆದಿದ್ದು, ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಮಹಿಳೆ ನಿದ್ರಿಸುತ್ತಿದ್ದಾಗ ಮಗ ಅತ್ಯಾಚಾರ ಎಸಗಿದ್ದಾನೆ. ಅಂಗವಿಕಲ ಪತಿ ಈ ಸಂದರ್ಭ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
"ಆರೋಪಿ ತನ್ನ ಮೂವರು ಮಕ್ಕಳೊಂದಿಗೆ ತಂದೆ ತಾಯಿಯ ಜತೆ ವಾಸವಿದ್ದ. ಪ್ರತಿರೋಧ ತೋರಿದ ಮಹಿಳೆ ಮಗನ ಕೃತ್ಯದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ, ಕುತ್ತಿಗೆ ಬಳಿ ಚಾಕು ತಂದು ಬೆದರಿಸಿ ಅತ್ಯಾಚಾರ ಎಸಗಿದ" ಎಂದು ಸೆಂಧ್ವಾ ಪೊಲೀಸ್ ಠಾಣೆಯ ಅಧಿಕಾರಿ ದಿನೇಶ್ ಚೌಹಾಣ್ ವಿವರಿಸಿದ್ದಾರೆ.
ಆರೋಪಿಯ ಪತ್ನಿ ಎರಡು ವರ್ಷ ಹಿಂದೆ ಆತನನ್ನು ತೊರೆದ ಬಳಿಕ ತಂದೆ ತಾಯಿ ಜತೆ ಆತ ವಾಸವಿದ್ದ. ಆರೋಪಿಯ ಏಳು ವರ್ಷದ ಮಗನ ಎದುರಲ್ಲೇ ಈ ಕೃತ್ಯ ನಡೆದಿದೆ. ಬಾಲಕನನ್ನು ಬೆದರಿಸಿ ಬಾಯಿಮುಚ್ಚಿಸಿದ್ದ. ಮಗನಿಂದ ಬಿಡಿಸಿಕೊಂಡ ತಾಯಿ ಮೂವರು ಮೊಮ್ಮಕ್ಕಳೊಂದಿಗೆ ಪಕ್ಕದ ಹೊಲಕ್ಕೆ ಓಡಿ ರಕ್ಷಿಸಿಕೊಂಡರು ಎಂದು ಚೌಹಾಣ್ ಹೇಳಿದ್ದಾರೆ.
ಮಹಿಳೆ ಘಟನೆಯನ್ನು ಸಂಬಂಧಿಕರಿಗೆ ವಿವರಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.