ಚಿಕ್ಕಮಗಳೂರು: ಮನೆ ಕಳ್ಳತನಕ್ಕೆ ಯತ್ನಿಸಿದ ಅಸ್ಸಾಂ ಮೂಲದ ಮಹಿಳೆ ಬಂಧನ; ಇಬ್ಬರು ಪರಾರಿ
ಚಿಕ್ಕಮಗಳೂರು, ಸೆ.5: ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಹೊಂಚು ಹಾಕಿ ಕನ್ನ ಹಾಕುತ್ತಿದ್ದ ಅಸ್ಸಾಂ ಮೂಲದ ಕಳ್ಳರ ಗ್ಯಾಂಗ್ವೊಂದು ನಗರದಲ್ಲಿ ಪತ್ತೆಯಾಗಿದ್ದು, ಗ್ಯಾಂಗ್ನ ಸದಸ್ಯೆ ಎನ್ನಲಾದ ಓರ್ವ ಮಹಿಳೆಯನ್ನು ಪೊಲೀಸರು ಬಧುವಾರ ಬಂಧಿಸಿದ್ದು, ಆಕೆಯೊಂದಿಗಿದ್ದ ಇಬ್ಬರು ಪುರುಷರು ತಪ್ಪಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಜಾನ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಾತರಿ ಪಡಿಸಿಕೊಂಡ ಕಳ್ಳರ ಗ್ಯಾಂಗ್ನ ಸದಸ್ಯರು ಬುಧವಾರ ಮುಂಜಾನೆ ಮನೆಯ ಹೆಂಚು ತೆಗೆದು ಕಳ್ಳತನಕ್ಕೆ ಯತ್ನಿಸುತ್ತಿದ್ದ ವೇಳೆ ಮನೆಯ ಒಳಗೆ ಶಬ್ದ ಕೇಳಿಸಿಕೊಂಡ ನೆರೆಯವರು ಪರಿಶೀಲನೆ ನಡೆಸಿದಾಗ ಕಳ್ಳತನಕ್ಕೆ ಹೊಂಚು ಹಾಕಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಪುರುಷರು ಸ್ಥಳದಿಂದ ಕಾಲು ಕಿತ್ತಿದ್ದಾರೆ. ಆದರೆ ಗ್ರಾಮಸ್ಥರು ಮಹಿಳೆಯನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಧಿತ ಮಹಿಳೆಯಿಂದ ಐದಾರು ಸಿಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಕತ್ತರಿ, ಪರ್ಸ್ ಪತ್ತೆಯಾಗಿದೆ. ಇದರೊಂದಿಗೆ ಮುಂಬೈ, ರಾಜಸ್ಥಾನ, ಅಸ್ಸಾಂ, ರಾಜ್ಯದ ವಿವಿಧ ಬಿಲ್ಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿಸಿಕೊಂಡ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.