ಸಮೀರ್ ವರ್ಮಾ ಫೈನಲ್ಗೆ ಪ್ರವೇಶ
ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್
ಹೈದರಾಬಾದ್, ಸೆ.8: ಅಗ್ರ ಶ್ರೇಯಾಂಕದ ಸಮೀರ್ ವರ್ಮಾ ಸಹ ಆಟಗಾರ ಗುರುಸಾಯಿ ದತ್ತ್ ವಿರುದ್ಧ ಹೋರಾಟಕಾರಿ 3 ಗೇಮ್ಗಳ ಅಂತರದ ಜಯ ಸಾಧಿಸಿ ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದಾರೆ. ಇಲ್ಲಿ ಶನಿವಾರ 51 ನಿಮಿಷಗಳಲ್ಲಿ ಕೊನೆಗೊಂಡ 75,000 ಡಾಲರ್ ಬಹುಮಾನ ಮೊತ್ತದ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ಸಮೀರ್ ಶ್ರೇಯಾಂಕರಹಿತ ಗುರುಸಾಯಿದತ್ತ್ರನ್ನು 16-21, 21-15, 21-11 ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು.
ರವಿವಾರ ನಡೆಯಲಿರುವ ಫೈನಲ್ನಲ್ಲಿ ಸಮೀರ್ ಮಲೇಶ್ಯಾದ ಸೂಂಗ್ ಜೂ ವೆನ್ರನ್ನು ಎದುರಿಸಲಿದ್ದಾರೆ. ವೆನ್ ಮತ್ತೊಂದು ಸೆಮಿ ಫೈನಲ್ನಲ್ಲಿ ಏಳನೇ ಶ್ರೇಯಾಂಕದ ಫರ್ಮನ್ ಅಬ್ದುಲ್ ಖೋಲಿಕ್ರನ್ನು 21-17, 21-14 ಅಂತರದಿಂದ ಮಣಿಸಿದರು.
ಅಗ್ರ ಶ್ರೇಯಾಂಕದ ಸ್ಥಳೀಯ ಡಬಲ್ಸ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ನಲ್ಲಿ ಫೈನಲ್ಗೆ ತಲುಪಿದ್ದಾರೆ. ಸಾತ್ವಿಕ್-ಚಿರಾಗ್ ಸೆಮಿ ಫೈನಲ್ ಸುತ್ತಿನಲ್ಲಿ ತಮ್ಮದೇ ದೇಶದ ಅರುಣ್ ಜಾರ್ಜ್ ಹಾಗೂ ಸನ್ಯಂ ಶುಕ್ಲಾರನ್ನು 21-14, 21-6 ಗೇಮ್ಗಳ ಅಂತರದಿಂದ ಸೋಲಿಸಿದ್ದಾರೆ.
ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಹಾಂಕಾಂಗ್ನ ಚಾಂಗ್ ಟಕ್ ಚಿಂಗ್ ಹಾಗೂ ವಿಂಗ್ ಯುಂಗ್ರನ್ನು 21-19, 21-15 ಅಂತರದಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.
ಪ್ರಣವ್-ಸಿಕ್ಕಿ ಫೈನಲ್ನಲ್ಲಿ ಇಂಡೋನೇಶ್ಯಾದ ಅಕ್ಬರ್ ಬಿಂಗ್ಟಾಂಗ್ ಹಾಗೂ ವಿನ್ನಿ ಒಕ್ಟವಿನಾರನ್ನು ಎದುರಿಸಲಿದ್ದಾರೆ.