100 ಕೋಟಿ ರೂ. ಕ್ಲಬ್ಗೆ ಗೀತಾ ಗೋವಿಂದ
ಕಿರಿಕ್ಪಾರ್ಟಿ ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ನಲ್ಲೂ ಹೆಸರು ಮಾಡುತ್ತಿದ್ದಾರೆ. ಆಕೆ ನಾಯಕಿಯಾಗಿ ನಟಿಸಿರುವ ಗೀತಾಗೋವಿಂದಂ ಸೂಪರ್ ಹಿಟ್ ಆಗಿದ್ದು, ಮೂರೇ ವಾರದಲ್ಲಿ 100 ಕೋಟಿ ರೂ. ಬಾಚಿಕೊಂಡಿದೆ. ಅರ್ಜುನ್ ರೆಡ್ಡಿ ಚಿತ್ರದೊಂದಿಗೆ ತೆಲುಗು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಪಟ್ಟಕ್ಕೇರಿರುವ ವಿಜಯ್ದೇವರ ಕೊಂಡ ಈ ಚಿತ್ರದ ನಾಯಕ.
ಪರಶುರಾಮ್ ನಿರ್ದೇಶನದ ಗೀತಾ ಗೋವಿಂದಂ, ನವಿರಾದ ಹಾಸ್ಯವನ್ನು ಹೊಂದಿರುವ ಒಂದು ಅಪ್ಪಟ ಪ್ರೇಮಕಥೆಯನ್ನು ಹೊಂದಿದೆ. ಯುವಪ್ರೇಕ್ಷಕರನ್ನು ಸೆಳೆಯುತ್ತಿರುವ ಗೀತಾಗೋವಿಂದಂ, ಬಿಡುಗಡೆಯಾದಲ್ಲೆಲ್ಲಾ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.
ಸದ್ಯ ಮುಂದಿನ ಎರಡು ವಾರಗಳ ಕಾಲ ಬೇರೆ ಯಾವುದೇ ದೊಡ್ಡ ಮಟ್ಟದ ಚಿತ್ರವೂ ಬಿಡುಗಡೆಯಾಗದಿರುವುದರಿಂದ ಗೀತಗೋವಿಂದಂನ ಗೆಲುವಿನ ನಾಗಾಲೋಟ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ.
ಪ್ರೇಕ್ಷಕರಿಂದಲೂ ವಿಮರ್ಶಕರಿಂದಲೂ ಮುಕ್ತಕಂಠದ ಪ್ರಶಂಸೆ ಪಡೆದಿರುವ ಗೀತಾಗೋವಿಂದ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭಾರೀ ಯಶಸ್ಸು ಕಂಡಿದೆ. ಬಿಡುಗಡೆಯಾದ ಕೇವಲ 5 ದಿನಗಳೊಳಗೆ ಚಿತ್ರವು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಒಟ್ಟಾರೆ 55 ಕೋಟಿ ರೂ. ಸಂಪಾದಿಸಿದೆ.ಎರಡನೆ ವಾರದ ಕೊನೆಗೆ ಚಿತ್ರವು 100 ಕೋಟಿ ರೂ. ಕ್ಲಬ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ವಿಜಯ್ ದೇವರಕೊಂಡ 100 ಕೋಟಿ ರೂ. ಗಳಿಸಿದ ಚಿತ್ರಗಳಲ್ಲಿ ನಟಿಸಿದ ಏಳನೆಯ ಟಾಲಿವುಡ್ ನಟರಾಗಿದ್ದಾರೆ.