ಪ್ರವಾಸಕ್ಕೆ ಹೋದರೆ ರೆಸಾರ್ಟ್ ಗಳಲ್ಲಿ ತಂಗುತ್ತೀರೇ?.. ಹಾಗಾದರೆ ಎಚ್ಚರಿಕೆ ಇರಲಿ
ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ನಿಮ್ಮ ಖಾತೆಗೆ ಕನ್ನ ಕೊರೆಯುತ್ತಾರೆ!
ಅಡಿಮಾಲಿ(ಕೇರಳ), ಅ.16: ನೀವು ಬೇರೆ ಊರುಗಳಿಗೆ ಪ್ರವಾಸಕ್ಕೆ ತೆರಳಿದಾಗ ರೆಸಾರ್ಟ್ ನಲ್ಲಿ ಉಳಿದುಕೊಳ್ಳುತ್ತೀರೇ?, ಉಳಿದುಕೊಂಡರೆ ಬಿಲ್ ಪಾವತಿಯನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಮಾಡುತ್ತೀರೇ?.. ಹಾಗಾದರೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಏಕೆಂದರೆ ನಿಮ್ಮ ಖಾತೆಯಲ್ಲಿದ್ದ ಹಣ ಲೂಟಿಗೈಯುವ ಸಾಧ್ಯತೆಗಳಿವೆ.
ರೆಸಾರ್ಟ್ ಗೆ ಆಗಮಿಸುತ್ತಿದ್ದ ಪ್ರವಾಸಿಗರ ಖಾತೆಗೆ ಕನ್ನ ಹಾಕುತ್ತಿದ್ದವನನ್ನು ಬಂಧಿಸಿರುವ ಪೊಲೀಸರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಮುನ್ನಾರ್ ಚಿತ್ತಿರಪುರಂನ ಗ್ರೀನ್ಟ್ರೀಸ್ ರಿಸಾರ್ಟ್ನ ನೌಕರ ಚಾಲಕ್ಕುಡಿಯ ಗ್ಲಾಡ್ವಿನ್(35) ಎಂಬಾತನನ್ನು ವೆಳ್ಳತ್ತುವಲ್ ಪೊಲೀಸರ ನೆರವಿನಲ್ಲಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ ಚೈನಾ ನಿರ್ಮಿತ ಸೈಪಿಂಗ್ ಮೆಶಿನ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ.
ರೂಮ್ ಬುಕ್ ಮಾಡಿ ಉಳಿದುಕೊಳ್ಳಲು ಬರುತ್ತಿದ್ದ ಹೆಚ್ಚಿನವರು ಬಾಡಿಗೆ, ಇತರ ಖರ್ಚುಗಳಿಗೆ ತಮ್ಮ ಎಟಿಎಂ, ಡೆಬಿಟ್ ಕಾರ್ಡ್ಗಳನ್ನು ಉಪಯೋಗಿಸುತ್ತಿದ್ದರು. ಬಂಧಿತ ಗ್ಲಾಡ್ವಿನ್ ನೈಜ ಬಿಲ್ ಅನ್ನು ರೆಸಾರ್ಟ್ನ ಸ್ವೈಪಿಂಗ್ ಮೆಶಿನ್ನಲ್ಲಿ ಸೈಪ್ ಮಾಡಿದ ನಂತರ ತನ್ನ ಬಳಿಯಿದ್ದ ಚೈನಾನಿರ್ಮಿತ ಸ್ವೈಪಿಂಗ್ ಮೆಶಿನ್ನಲ್ಲಿ ಖಾರ್ಡ್ ಸ್ವೈಪ್ ಮಾಡಿ ಪ್ರವಾಸಿಗರ ಎಟಿಎಂ ಕಾರ್ಡ್ ವಿವರಗಳನ್ನು ಅರಿತುಕೊಳ್ಳುತ್ತಿದ್ದ. ನಂತರ ಖಾತೆಯಿಂದ ಹಣವನ್ನು ವಿತ್ಡ್ರಾ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊರರಾಜ್ಯಗಳ ಮತ್ತು ವಿದೇಶಿ ಪ್ರವಾಸಿಗರ ಖಾತೆಗೆ ಈ ರೀತಿ ಕನ್ನ ಹಾಕುತ್ತಿದ್ದ ಈತನ ವಿರುದ್ಧ ತೆಲಂಗಾಣದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸರು ರೆಸಾರ್ಟ್ಗೆ ರೈಡ್ ಮಾಡಿ ಚೈನೀಸ್ ಸ್ವೈಪಿಂಗ್ ಮೆಶಿನ್ನ್ನು ವಶಪಡಿಸಿಕೊಂಡು ಗ್ಲಾಡ್ವಿನ್ ನನ್ನು ಬಂಧಿಸಿದ್ದಾರೆ.