ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ 9,282 ಪರೀಕ್ಷಾರ್ಥಿಗಳು
*ಎಂಟು ಡಿವಿಷನ್ ಸೆಂಟರ್ಗಳು *463 ಪರೀಕ್ಷಾ ಕೇಂದ್ರಗಳು

File photo
ಮಂಗಳೂರು, ಫೆ.5: ರಾಜ್ಯದಲ್ಲಿ ಸಮಸ್ತ ಮದ್ರಸ ಪಬ್ಲಿಕ್ ಪರೀಕ್ಷೆಯು ಫೆ.8ರಿಂದ ಆರಂಭಗೊಳ್ಳಲಿದೆ. ಶುಕ್ರವಾರ ಅಪರಾಹ್ನ 3 ಗಂಟೆಗೆ ಡಿವಿಷನ್ ಕೇಂದ್ರಗಳಲ್ಲಿ ಮಾಹಿತಿ ಶಿಬಿರ ಹಾಗೂ ಪರಿಕರಗಳ ವಿತರಣೆ ನಡೆಯಲಿದೆ.
ಕೇರಳದ ಚೇಳಾರಿ ಕೇಂದ್ರಸ್ಥಾನವಾಗಿ ಕಾರ್ಯಾಚರಿಸುತ್ತಿರುವ ಸಮಸ್ತ ಶಿಕ್ಷಣ ಮಂಡಳಿ ಅಧೀನದಲ್ಲಿ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು,ವಿದೇಶ ರಾಷ್ಟ್ರಗಳ 10,946 ಮದ್ರಸಗಳು ನೋಂದಣಿಯಾಗಿದೆ. ಪ್ರಸಕ್ತ ಮದ್ರಸಗಳಲ್ಲಿ ಕಲಿಯುತ್ತಿರುವ 2,52,488 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಮಂಗಳೂರು, ಮೂಡುಬಿದಿರೆ, ದೇರಳಕಟ್ಟೆ, ಮಿತ್ತಬೈಲು, ಕಲ್ಲಡ್ಕ, ಉಪ್ಪಿನಂಗಡಿ, ಪುತ್ತೂರು, ಸುಳ್ಯ ಸಹಿತ ಒಳಗೊಂಡ ಎಂಟು ಡಿವಿಷನ್ ಕೇಂದ್ರಗಳಿವೆ. ಕ್ರಮವಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಖಾಸಿಂ ಮುಸ್ಲಿಯಾರ್ ಮಠ, ಮುಹಮ್ಮದ್ ದಾರಿಮಿ ಕಾಸರಗೋಡು, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಮುಹಮ್ಮದ್ ನವವಿ ಮುಂಡೋಳೆ, ಹನೀಫ್ ಮುಸ್ಲಿಯಾರ್ ಬೋಳಂತೂರು, ಹಂಝ ಫೈಝಿ ಕಣ್ಣೂರು, ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ಪರೀಕ್ಷಾ ವರಿಷ್ಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ 463 ಸೆಂಟರ್ಗಳನ್ನು ಪರೀಕ್ಷೆಗಾಗಿ ನಿಗದಿಪಡಿಸಲಾಗಿದೆ. ಐದನೇ ತರಗತಿಯಲ್ಲಿ 4,252 ವಿದ್ಯಾರ್ಥಿ ಗಳು, 7ನೇ ತರಗತಿಯಲ್ಲಿ 3,670 ವಿದ್ಯಾರ್ಥಿಗಳು, ಹತ್ತನೇ ತರಗತಿಯಲ್ಲಿ 1,142 ವಿದ್ಯಾರ್ಥಿಗಳು, ಪ್ಲಸ್ಟು ತರಗತಿ ಯಲ್ಲಿ 98 ವಿದ್ಯಾರ್ಥಿಗಳ ಸಹಿತ 9,282 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಆಯಾ ಮದ್ರಸದ ಆಡಳಿತ ಸಮಿತಿಯ ಪ್ರತಿನಿಧಿಗಳು ಮದ್ರಸ ಕೊಠಡಿಯಲ್ಲಿ ಹಾಜರಿದ್ದು ಪರೀಕ್ಷೆಯ ಸುಗಮಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯಗಳನ್ನು ಮಾಡಿಕೊಂಡು ಮೇಲ್ವಿಚಾರಕರಿಗೆ ನೆರವಾಗಬೇಕೆಂದು ಮಂಗಳೂರು ಡಿವಿಷನ್ ಸಮಸ್ತ ಪರೀಕ್ಷಾ ವರಿಷ್ಠಾಧಿಕಾರಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.