ನ.7ರಿಂದ 9ರವರೆಗೆ ಆಲ್ಕೋಹಾಲಿಕ್ಸ್ ಅನಾನಿಮಸ್ 3ನೇ ರಾಷ್ಟ್ರೀಯ ಸಮ್ಮೇಳನ
ಮಂಗಳೂರು : ಆಲ್ಕೋಹಾಲಿಕ್ಸ್ ಅನಾನಿಮಸ್ 3ನೇ ರಾಷ್ಟ್ರೀಯ ಸಮ್ಮೇಳನವು ನಗರದ ಬೆಂದೂರು ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ನ.7, 8, 9ರಂದು ನಡೆಯಲಿದೆ ಎಂದು ಸಂಸ್ಥೆಯ ಪರವಾಗಿ ರೋಹನ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.7ರಂದು ಸಂಜೆ 5:45ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ, ಬೆಂದೂರು ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ವಾಲ್ಟರ್ ಡಿಸೋಜ, ಆಲ್ಕೋಹಾಲಿಕ್ ಅನಾನಿಮಸ್‌ನ ಜನರಲ್ ಸರ್ವಿಸ್ ಬೋರ್ಡ್‌ನ ಚೇರ್ಮನ್, ಎಡಿಜಿಪಿ ಅರುಣ್ ಚಕ್ರವರ್ತಿ ಭಾಗವಹಿಸಲಿದ್ದಾರೆ. ಉಳಿದ ಎರಡು ದಿನ ಮದ್ಯವರ್ಜನೆ ಮಾಡಲು ಬಯಸುವವರು ಭಾಗವಹಿಸಬಹುದಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದರು.
ಮದ್ಯ ಸೇವನೆಯಿಂದ ಹೊರಬರುವ ಉದ್ದೇಶದಿಂದ ನ್ಯೂಯಾರ್ಕ್‌ನ ಸ್ಟಾಕ್ ಬ್ರೋಕರ್ ಮತ್ತು ಅಕ್ರಾನ್‌ನ ಸರ್ಜನ್ 1935ರಲ್ಲಿ ಅಮೆರಿಕದ ಓಹಿಯೋ ಅಕ್ರಾನ್‌ನಲ್ಲಿ ಈ ಸಂಸ್ಥೆಯನ್ನು ಆರಂಭಿಸಿದರು. ಇದೀಗ 90ನೇ ವರ್ಷಾಚರಣೆ ಮಾಡುತ್ತಿದೆ. 1957ರಲ್ಲಿ ಈ ಸಂಸ್ಥೆ ಭಾರತಕ್ಕೆ ಕಾಲಿಟ್ಟಿದೆ. 1996ರಲ್ಲಿ ಮಂಗಳೂರಿನಲ್ಲಿ ಸಂಘಟನೆ ರಚನೆ ಆಯಿತು ಎಂದು ರೋಹನ್ ಹೇಳಿದರು.
ನಗರದಲ್ಲಿ 40-50ರಷ್ಟು ಗುಂಪುಗಳಿದೆ. ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿ ದಿನ ಒಗ್ಗೂಡಿ ಮದ್ಯ ಸೇವನೆ ಬಿಟ್ಟುವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮದ್ಯ ಬಿಡಲು ಬಯಸುವವರು ಇಂತಹ ಮೀಟಿಂಗ್‌ಗಳಲ್ಲಿ ಭಾಗವಹಿಸಬಹುದು. ಅಲ್ಲಿ ಈಗಾಗಲೇ ಮದ್ಯ ವರ್ಜನೆ ಮಾಡಿದವರು ಇತರರಿಗೆ ಮಾರ್ಗದರ್ಶನ, ಭರವಸೆ ನೀಡುತ್ತಾರೆ ಎಂದು ಹೇಳಿದರು.







