ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು
ಬೆಳ್ತಂಗಡಿ: ಸೆ. 8ರಂದು ಉಜಿರೆಯ ಗಣೇಶ ಚೌತಿ ಸಮಾರಂಭದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿರುವುದು ಸಮುದಾಯಗಳ ನಡುವೆ ಅಶಾಂತಿ, ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಜಿರೆಯ ಅಜಿತ್ ಹೆಗ್ಡೆ ಬೆಳ್ತಂಗಡಿ ಠಾಣೆಗೆ ಹಾಗೂ ಬಾಹುಬಲಿ ಸೇವಾ ಸಮಿತಿ ಧರ್ಮಸ್ಥಳ ಅಧ್ಯಕ್ಷ ಪದ್ಮಪ್ರಸಾದ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಗಣೇಶ ಚೌತಿಯ ಸಮಾರಂಭದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ, ಟೀಕೆ ಮಾಡಿ, ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಜೈನ ಮತ್ತು ಹಿಂದೂ ಸಮುದಾಯದ ನಡುವೆ ಅಶಾಂತಿ ನಿರ್ಮಿಸಲು ಉದ್ದೇಶಿಸಿರುವುದು ಸ್ಪಷ್ಟವಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸಮುದಾಯಗಳನ್ನು ಬೆದರಿಸಿರುವುದಲ್ಲದೆ ದೇವರು ಮತ್ತು ದೇವಸ್ಥಾನ, ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಬಳಸಿ, ಜೈನ ವರ್ಗದ ಜನರ ಮತ್ತು ಜೈನ ಸಂಸ್ಥೆಗಳ ಮೇಲಿನ ಗೌರವ ಕುಗ್ಗಿಸಲು ಯತ್ನಿಸಲಾಗಿದೆ. ಜೈನ ಹಾಗೂ ಹಿಂದೂಗಳ ಮಧ್ಯೆ ವೈರತ್ವ ಬೆಳೆಸುವ ಹುನ್ನಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ ಹಾಗೂ ಧರ್ಮಸ್ಥಳ ಠಾಣೆಯ ಪೊಲೀಸರು ದೂರು ಸ್ವೀಕರಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.