ಪರ್ಮಿಟ್ ವಿಚಾರವಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನಿರ್ಧಾರ ಶ್ಲಾಘನೀಯ: ಆಟೋ ಯೂನಿಯನ್
ವಾಮಂಜೂರು: ಆಟೊ ರಿಕ್ಷಾ ವಲಯ ಪರ್ಮಿಟ್ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತೆಗೆದುಕೊಂಡ ನಿರ್ಧಾರ ಶ್ಲಾಘನೀಯವಾಗಿದೆ ಎಂದು ನೇತ್ರಾವತಿ ಆಟೋ ಯೂನಿಯನ್ ಅಧ್ಯಕ್ಷ ವೆಂಕಟೇಶ್ ಶೆಟ್ಟಿ ನೀರೊಳಿಗೆ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಪೂರ್ವಭಾವಿಯಾಗಿ ಯೂನಿಯಲ್ ಪದಾಧಿಕಾರಿಗಳಿಗಾಗಿ ನಡೆಸಲಾದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಿಕ್ಷಾ ವ್ಯಾಪ್ತಿಯನ್ನು ವಲಯಗಳಾಗಿ ವಿಂಗಡಿಸುವುದರಿಂದ ಗ್ರಾಮೀಣ ವಲಯದ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿದೆ. ಇದನ್ನೂ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಸೆಪ್ಟೆಂಬರ್ 5ರಂದು ನಡೆಯುವ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ನಮಗೆ ಪೂರಕ ನಿರ್ಧಾರ ಬರಬಹುದು ಎಂಬ ಆಶಾಭಾವನೆ ಇದೆ ಎಂದು ಅವರು ಹೇಳಿದರು.
ಪಿಲಿಕುಳ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮೂಡುಶೆಡ್ಡೆ ಎದುರುಪದವು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲಾ ಆಟೋ ರಿಕ್ಷಾಗಳಿಗೂ ಒಂದೇ ರೀತಿಯ ವಿಮೆ, ಸರಕಾರಿ ವೆಚ್ಚ ಪಾವತಿ ಮಾಡುತ್ತೇವೆ. ವಲಯ ಆಟೋಗಳಿಗೆ ಬೇರೆ ಗ್ರಾಮಾಂತರ ಆಟೋ ಗಳಿಗೆ ಬೇರೆ ಎಂದಿಲ್ಲ. ಆದರೆ, ವಲಯ ವಿಂಗಡನೆ ಮಾಡಿ ಒಂದು ಕಣ್ಣಿಗೆ ಬೆನ್ನೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಲಾಗಿದೆ ಎಂದು ಆರೋಪಿಸಿದ ಅವರು, ಆದರೆ ಈಗಿನ ಜಿಲ್ಲಾಧಿಕಾರಿ ಕೈಗೊಂಡ ನಿರ್ಧಾರ ಅದೆಷ್ಟೋ ಬಡ ಆಟೋ ಚಾಲಕರು ಮಾಲಕರ ಕಷ್ಟದ ಪರವಾಗಿದೆ ಎಂದ ನುಡಿದರು.
ಸಭೆಯಲ್ಲಿ ನೇತ್ರಾವತಿ ಆಟೋ ಯೂನಿಯನ್ ಕಾರ್ಯದರ್ಶಿ ರಾಜೇಶ್ ನೀರುಮಾರ್ಗ, ಶಿವ ಶಕ್ತಿ ಆಟೋ ರಿಕ್ಷಾ ಪಾರ್ಕ್ ಉಪ ಕಾರ್ಯದರ್ಶಿ ಸಂತೋಷ್, ಸ್ವಾಮಿ ಕೊರಗಜ್ಜ ಆಟೋ ರಿಕ್ಷಾ ಪಾರ್ಕ್ ಅಧ್ಯಕ್ಷ ವಿನೋದ್ ರಾಜ್, ಪ್ರಕಾಶ್, ನೀರುಮಾರ್ಗ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕಿರಣ್ ಡಿಸೋಜ, ಗುರುಪುರ ಕೈಕಂಬ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ರಮೇಶ್, ವಳಚ್ಚಿಳ್ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ರಾಜೇಶ್ ನೆಲ್ಸನ್, ಪರಾರಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.