Mangaluru | ಇಂಟಾಕ್ ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಸಾಂಪ್ರದಾಯಿಕ ಬುಟ್ಟಿ, ಕಡೆಗೋಲು ತಯಾರಿಕಾ ಕಾರ್ಯಾಗಾರ

ಮಂಗಳೂರು, ಡಿ.7: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆ (ಇಂಟಾಕ್)ಯ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ವಿಶ್ವ ಪರಂಪರೆಯ ಸಪ್ತಾಹದ ಅಂಗವಾಗಿ ಸಾಂಪ್ರದಾಯಿಕ ಬುಟ್ಟಿ ತಯಾರಿಕೆ ಮತ್ತು ಕಡೆಗೋಲು ತಯಾರಿಕೆಯ ಬಗ್ಗೆ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ಇತ್ತೀಚೆಗೆ ಕಾರ್ಯಾಗಾರ ನಡೆಯಿತು.
ಕುಶಲರ್ಕುಗಳಾದ ಬಾಬು ಕೊರಗ ಕಡ್ತಲ ಮತ್ತು ಅಮ್ಮಿ ಕೊರಗ ಕಡ್ತಲ ಬುಟ್ಟಿ ತಯಾರಿಕೆಯನ್ನು ಪ್ರದರ್ಶಿಸಿದರು. ಸದಾನಂದ ಗುಡಿಗ ಕೆರುವಾಶೆ ಮತ್ತು ಪ್ರಶಾಂತ್ ಗುಡಿಗ ಕೆರುವಾಶೆ ಕಡೆಗೋಲು ತಯಾರಿಕಾ ಪ್ರದರ್ಶನಕ್ಕೆ ನೇತೃತ್ವ ವಹಿಸಿದರು. ನೈಸರ್ಗಿಕ ವಸ್ತುಗಳು, ಕೈ ಉಪಕರಣಗಳು ಮತ್ತು ಎರಡೂ ಕರಕುಶಲಗಳ ಪಾರಂಪರಿಕ ತಂತ್ರಗಳನ್ನು ಪರಿಚಯಿಸಲಾಯಿತು.
ಪ್ರದರ್ಶನದಲ್ಲಿ ಮರದ ಆಯ್ಕೆ, ಕಚ್ಚಾ ವಸ್ತುಗಳ ಸಿದ್ಧತೆ ಮತ್ತು ಹಂತ ಹಂತವಾಗಿ ತಯಾರಿಕಾ ಪ್ರಕ್ರಿಯೆಯನ್ನು ವಿವರಿಸಲಾಯಿತು. ಕೈಯಾರೆ ತಯಾರಿಸಿದ ಅಡುಗೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪ್ರದರ್ಶಿಸಿ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಾಂಪ್ರದಾಯಿಕ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ ಸದಾನಂದ ಗುಡಿಗ, ಕೈಯಿಂದ ತಯಾರಿಸಲಾಗುತ್ತಿದ್ದ ಮರದ ಕಡೆಗೋಲುಗಳನ್ನು ಈಗ ಯಾಂತ್ರಿಕವಾಗಿ ತಯಾರಿಸಿ ರಾಸಾಯನಿಕ ಹೊಳಪು ಕೊಟ್ಟ ವಸ್ತುಗಳಾಗಿ ಮಾರಲಾಗುತ್ತಿವೆ. ಆದರೆ ಅವು ಗುಣಮಟ್ಟಕ್ಕೂ ಬಾಳಿಕೆಗೂ ಖಾತರಿ ನೀಡುವುದಿಲ್ಲ. ನಮ್ಮ ತಂತ್ರಗಳು ಪಾರದರ್ಶಕವಾಗಿದ್ದು, ತಲೆಮಾರುಗಳಿಂದ ಬಂದ ಪರಂಪರೆಯಾಗಿದೆ. ಈ ಪರಂಪರೆ ಉಳಿಯಲು ಹೆಚ್ಚಿನ ಉತ್ತೇಜನ ಮತ್ತು ಬೇಡಿಕೆ ಅಗತ್ಯ ಎಂದು ಹೇಳಿದರು.
ಬಾಬು ಕೊರಗ ಮಾತನಾಡಿ, ಕೋವಿಡ್-19ರ ವೇಳೆ ನಮ್ಮ ಮಾರಾಟ ತೀವ್ರವಾಗಿ ಕುಸಿಯಿತು. ಕೆಲವರ ನೆರವಿನಿಂದ ನಾವು ನಮ್ಮ ಉತ್ಪನ್ನಗಳನ್ನು ಆನ್ಲೈನ್ ಮತ್ತು ರೈತ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಯಿತು. ಆದರೆ ಈ ವಸ್ತುಗಳನ್ನು ದೂರದ ಮೇಳಗಳಿಗೆ ಮತ್ತು ಪ್ರದರ್ಶನಗಳಿಗೆ ಸಾಗಿಸುವುದು ಕಷ್ಟವಾಗಿದೆ ಎಂದರು.
ಇಂಟಾಕ್ ಸದಸ್ಯೆ ರೇಷ್ಮಾ ಶೆಟ್ಟಿ ಕಲಾವಿದರನ್ನು ಪರಿಚಯಿಸಿದರು.







