ಮಂಗಳೂರು | ಮೀಫ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳ ಸಮಾವೇಶ

ಮಂಗಳೂರು, ಡಿ.9: ಮುಸ್ಲಿಂ ವಿದ್ಯಾ ಸಂಸ್ಥೆಗಳ ಒಕ್ಕೂಟ ಕೇಂದ್ರ ಘಟಕ ಮಂಗಳೂರು ಇದರ ಆಶ್ರಯದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಮತ್ತು ಮುಖ್ಯ ಶಿಕ್ಷಕರ ಸಮಾವೇಶವು ಮಂಗಳವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆಯಿತು.
ಈ ವಿದ್ಯಾಸಂಸ್ಥೆಗಳಲ್ಲಿ ಅಳವಡಿಸಿರುವ ಸಿವಿಲ್ ಸರ್ವಿಸ್ ಪಠ್ಯ ಕ್ರಮದ ಪ್ರಗತಿ, ಕ್ಯಾಂಪಸ್ ಟ್ರಯಲ್ ಮಾಸಿಕ ಪತ್ರಿಕೆ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ಅಳವಡಿಸುವ, ಶಾಲಾ ಆಮಂತ್ರಣ ಪತ್ರಿಕೆಗಳನ್ನು ತಯಾರಿಸುವ ಶಿಷ್ಠಾಚಾರ ಮತ್ತು ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವ, ಎಸೆಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಪ್ರಯತ್ನದ ಬಗ್ಗೆ ಮತ್ತು ಎಸೆಸೆಲ್ಸಿ ಮಾದರಿ ಪತ್ರಿಕೆಗಳನ್ನು ಮೀಫ್ ಮೂಲಕ ವಿತರಿಸುವ ವಿಚಾರದಲ್ಲಿ ಚರ್ಚಿಸಲಾಯಿತು.
ಮೀಫ್ ವಿದ್ಯಾಸಂಸ್ಥೆಗಳ ಹಿರಿಯ ಮುಖ್ಯ ಶಿಕ್ಷಕರನ್ನು ಒಳಗೊಂಡ ಶೈಕ್ಷಣಿಕ ಸಲಹಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಜಯಶ್ರೀ (ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ ಬಜ್ಪೆ), ಖತೀಜತುಲ್ ಕುಬ್ರ (ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಹ್ಯಾಟ್ಹಿಲ್), ಶಶಿಕಲಾ (ಚೈತನ್ಯ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ), ಶಂಶಾದ್ ಕಣ್ಣೂರ್ (ಆಂಗ್ಲ ಮಾಧ್ಯಮ ಶಾಲೆ) ಸಫೂರ (ಝೆನಿತ್ ಆಂಗ್ಲ ಮಾಧ್ಯಮ ಶಾಲೆ ಮುಡಿಪು), ಪ್ರಸನ್ನ (ಅಲ್ ಅಝ್ಹರ್ ಆಂಗ್ಲ ಮಾಧ್ಯಮ ಶಾಲೆ ಹೆಜಮಾಡಿ), ನುಸ್ರತ್ (ಸ್ನೇಹ ಆಂಗ್ಲ ಮಾಧ್ಯಮ ಶಾಲೆ ಪಕ್ಕಲಡ್ಕ), ಎ.ಎಚ್. ನಾಸಿರ್ (ಬಾಮಿ ಆಂಗ್ಲ ಮಾಧ್ಯಮ ಶಾಲೆ ಗುರುಪುರ) ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಎಸೆಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಲು ದ.ಕ. ಮತ್ತು ಉಡುಪಿ ಜಿಲ್ಲೆಗಳ 14 ಕೇಂದ್ರಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಕಾರ್ಯಗಾರ ನಡೆಸುವ ಬಗ್ಗೆ ಸಭೆಗೆ ಮಾಹಿತಿ ನೀಡಲಾಯಿತು.
ಕೇಂದ್ರ ಘಟಕದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೀಫ್ ಉಡುಪಿ ಘಟಕದ ಗೌರವಾಧ್ಯಕ್ಷ ಶಾಭಿ ಅಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ., ಬೆಳ್ಳಿಹಬ್ಬ ಸಂಚಾಲಕ ಬಿ.ಎ. ಇಕ್ಬಾಲ್, ಕಾರ್ಯಕಾರಿ ಸದಸ್ಯರಾದ ಅಡ್ವೋಕೇಟ್ ಉಮರ್ ಫಾರೂಕ್, ಆದಿಲ್ ಸೂಪಿ, ಅಝೀಝ್ ಅಂಬರ್ವ್ಯಾಲಿ, ಹೈದರ್ ಅನುಗ್ರಹ, ರಝಾಕ್ ಹಜಾಜ್, ಸಿವಿಲ್ ಸರ್ವಿಸ್ ಕೋಚ್ ಮುಹಮ್ಮದ್ ಶಿಹಾಬುದ್ದೀನ್ ಅಬೂಬಕ್ಕರ್ ಉಪಸ್ಥಿತರಿದ್ದರು.
ಮೀಫ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಪರ್ವೇಝ್ ಅಲಿ ಸ್ವಾಗತಿಸಿ, ವಂದಿಸಿದರು.







