ಜಿಎಂಪಿಎಲ್ ನೆಲದ ಕಾನೂನಿಗೆ ಗೌರವ ನೀಡಿದೆ: ಲಾರೆನ್ಸ್ ಡಿ ಸೋಜ
ಮಂಗಳೂರು : ಜೆಬಿಎಫ್ ಕಂಪೆನಿಗೆ ಜಮೀನು ಬಿಟ್ಟುಕೊಟ್ಟ ಕುಟುಂಬದ ಪರ ಉದ್ಯೋಗ ಗಿಟ್ಟಿಸಿಕೊಂಡಿದ್ದ 115 ಮಂದಿಗೆ ಉದ್ಯೋಗವನ್ನು ಮುಂದುವರಿಸಲು ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸೆಪ್ಟಂಬರ್ ತಿಂಗಳಾಂತ್ಯ ದೊಳಗೆ ಆದೇಶ ನೀಡುವ ನಿರ್ಧಾರವನ್ನು ತಿಳಿಸಿರುವುದು ಸಂತಸದ ವಿಚಾರವಾಗಿದೆ. ಇದರೊಂದಿಗೆ ಜಿಎಂಪಿಎಲ್ ನೆಲದ ಕಾನೂನಿಗೆ ಕೊನೆಗೂ ಗೌರವ ನೀಡಿದೆ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಅಭಿಪ್ರಾಯಪಟ್ಟಿದ್ದಾರೆ.
ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಗೆಲವು, ಭೂಮಿ ಕೊಟ್ಟು ಉದ್ಯೋಗಕ್ಕಾಗಿ ೪೫ ದಿನಗಳಿಂದ ಹೋರಾಟ ನಡೆಸಿದ ಮತ್ತು ಕೆಲಸವುಇಲ್ಲದೆ ವರ್ಷದಿಂದ ಅಲೆದಾಡುತ್ತಿರುವ ಸ್ಥಳೀಯರ ಗೆಲವು ಆಗಿದೆ ಎಂದು ಅವರು ಹೇಳಿದರು.
ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ಪಿಎಲ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟು ಪಿಡಿಎಫ್ (ಭೂಮಿ ಕಳೆದುಕೊಂಡ ಕುಟುಂಬಸ್ಥರು) ಆಧಾರದಲ್ಲಿ ಉದ್ಯೋಗ ಪಡೆದಿದ್ದ ಸ್ಥಳೀಯರಿಗೆ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಖಾಯಂಗೊಳಿಸುವಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನೀಡಿದ್ದ ಸೂಚನೆ ಮೇರೆಗೆ ಜಿಎಂಪಿಎಲ್ ಕಂಪೆನಿ ಇದೀಗ ಒಪ್ಪಿಗೆ ನೀಡಿದೆ. ಕಳೆದ ಒಂದು ವರ್ಷದಿಂದ ಮೊಂಡುತನವನ್ನು ಪ್ರದರ್ಶಿಸುತ್ತಿದ್ದ ಗೈಲ್ ಕಂಪೆನಿಯು ಇದೀಗ ರಾಜ್ಯ ಸರಕಾರ, ಕೇಂದ್ರ ಸರಕಾರ, ಜಿಲ್ಲಾಡಳಿತ, ಎಂಎಇಝೆಡ್ ಅಧಿಕಾರಿಗಳ ಸ್ಪಷ್ಟ ಕಾನೂನು ಪರಿಪಾಲನೆ ಮಾಡಿರುವ ಹಿನ್ನೆಲೆಯಲ್ಲಿ ತಾನು ಅನುಸರಿಸುತ್ತಿದ್ದ ನಿಲುವಿನಿಂದ ಹಿಂದಕ್ಕೆ ಸರಿದಿದೆ ಎಂದರು.
ಎಂಎಸ್ಇಝೆಡ್ ವಿಶೇಷ ಆರ್ಥಿಕ ವಲಯವು ವಶಪಡಿಸಿಕೊಂಡ ಜಾಗದಲ್ಲಿ ಸುಮಾರು 115 ಎಕ್ರೆ ಸ್ಥಳವನ್ನು ಜೆಬಿಎಫ್ ಕಂಪೆನಿಗಾಗಿ ನೀಡಿತ್ತು.ಈ ಕಂಪೆನಿಯಲ್ಲಿ ೧೧೫ಮಂದಿ ಸ್ಥಳೀಯರು ಉದ್ಯೋಗ ಪಡೆದಿದ್ದರು. ಆದರೆ ಮುಂದೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪೆನಿ ದಿವಾಳಿ ಆಗಿತ್ತು. ಎನ್ಸಿಎಲ್ಟಿ ಮೂಲಕ ಜೆಪಿಎಫ್ ಕಂಪೆನಿಯನ್ನು ಗೈಲ್ ಇಂಡಿಯಾ ಕಂಪೆನಿ ತನ್ನ ವಶಕ್ಕೆ ಪಡೆದಿತ್ತು ಎಂದು ಲಾರೆನ್ಸ್ ಹೇಳಿದರು.
*80 ಮಂದಿ ಪರ ಹೋರಾಟ: ಜೆಬಿಎಫ್ನಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಗೊಂಡ ಅರ್ಹ 80 ಮಂದಿ ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಮರಳಿ ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ನಲ್ಲಿ ಉದ್ಯೋಗ ಕೊಡಿಸಲು ಹೋರಾಟದ ಅಗತ್ಯತೆ ಇದೆ ಎಂದು ಜಿಲ್ಲಾ ಕಾಂಗ್ರೆಸ್ನ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ವಿಭಾಗದ ಅಧ್ಯಕ್ಷ ಮನೋರಾಜ್ ರಾಜೀವ್ ತಿಳಿಸಿದ್ದಾರೆ.
ಎಲ್ಲ ಅರ್ಹತೆ, ಅನುಭವ ಮತ್ತು ಸೂಕ್ತ ತರಬೇತಿಯನ್ನು ಪಡೆದ ನೌಕರರನ್ನು ಹೊರಗಿಟ್ಟು ಹೊಸಬರನ್ನು ನೇಮಿಸಿಕೊ ಳ್ಳುವುದು ಸರಿಯಲ್ಲ. ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕೊಡಿಸುವಂತೆ ಅವರು ಆಗ್ರಹಿಸಿದರು.
ಕಂಪೆನಿಯಲ್ಲಿ ಹೊರಗಿನವರಿಗೆ ಕೊಡುವುದು ಬೇಡ ಎಂದು ನಾವು ಹೇಳುವುದಿಲ್ಲ. ಆದರೆ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಪ್ರಮುಖರಾದ ನೀರಜ್ಪಾಲ್,ಸದಾಶಿವ ಶೆಟ್ಟಿ, ವಹಾಬ್ ಕುದ್ರೋಳಿ, ಸದಾಶಿವ ಶೆಟ್ಟಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.