ದೇಶದ ಬಹುತ್ವದ ಸತ್ಯಕ್ಕೆ ಸಮಾನತೆಯ ಸ್ಪರ್ಶ ನೀಡಿದ್ದ ಗಾಂಧಿ: ಡಾ. ಪುರುಷೋತ್ತಮ ಬಿಳಿಮಲೆ
ಮಂಗಳೂರು: ದೇಶದ ಬಹುತ್ವದ ಸತ್ಯಕ್ಕೆ ಸಮಾನತೆಯ ಸ್ಪರ್ಶ ನೀಡಿ ಎಲ್ಲರಿಗೂ ಸಹ್ಯವಾಗುವ ಸತ್ಯವನ್ನು ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ್ದರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ನಂತೂರಿನ ಸಿಒಡಿಪಿ ಸಭಾಂಗಣದಲ್ಲಿ ಬುಧವಾರ ರ್ಯಾಕ್ಣೋ ವತಿಯಿಂದ ಇಂಡಿಯನ್ ಕೆಥೊಲಿಕ್ ಪ್ರೆಸ್ ಅಸೋಸಿಯೇಶನ್ (ಐಸಿಪಿಎ)ನ ಕ್ರಿಶ್ಚಿಯನ್ ಪತ್ರಕರ್ತರ ಪ್ರಶಸ್ತಿ ಕಾರ್ಯಕ್ರಮದ 29ನೆ ರಾಷ್ಟ್ರೀಯ ಸಮಾವೇಶದಲ್ಲಿ ‘ಗಾಂಧಿಯ ಪತ್ರಿಕೋದ್ಯಮ’ ಚರ್ಚಾಗೋಷ್ಠಿಯಲ್ಲಿ ‘ಸತ್ಯ ಮತ್ತು ಅಹಿಂಸೆ’ ಎಂಬ ವಿಷಯದ ಕುರಿತು ಬೆಳಕು ಚೆಲ್ಲಿದರು.
ಭಾರತದ ಪ್ರತಿ ಪ್ರಾಂತ, ಭಾಷೆ, ಸಮುದಾಯಗಳಿಗೆ ಅನುಗುಣವಾದ ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಸತ್ಯಗಳಿವೆ. ಈ ಬಹುತ್ವದ ಸತ್ಯವನ್ನು ಗಾಂಧೀಜಿಯವರು ಧಾರ್ಮಿಕ ನೆಲೆಗಟ್ಟಿನ ಆಧಾರದಲ್ಲಿಯೇ ಸಮಾನವಾದ ಸತ್ಯವನ್ನು ತಿಳಿ ಸುವ ಪ್ರಯತ್ನವನ್ನು ತಾವು ಹೊರಡಿಸುತ್ತಿದ್ದ ಪತ್ರಿಕೆಗಳ ಮೂಲಕ ಮಾಡಿದ್ದರು ಎಂದವರು ವಿಶ್ಲೇಷಿಸಿದರು.
ಧರ್ಮಶಾಸ್ತ್ರ, ಮನುಸ್ಮತಿಗಿಂತ ಭಿನ್ನವಾಗಿ ದೇಶದ 2011ರ ಜನಗಣತಿಯ ಪ್ರಕಾರ ಅಸ್ತಿತ್ವದಲ್ಲಿರುವ 19569 ಭಾಷೆಗಳನ್ನಾಡುವ ಜನರು ವಿಭಿನ್ನವಾದ ಪೌರಾಣಿಕ ಸತ್ಯಗಳನ್ನು ಹೊಂದಿದ್ದಾರೆ. ತುಳುನಾಡಿನಲ್ಲಿ ಕೊರಗತನಿಯ ಇಲ್ಲಿನ ಬಹುಮುಖ್ಯ ಸತ್ಯವಾಗಿರುವಂತೆಯೇ, ರಾಮಾಯಣ, ಮಹಾಭಾರತ ಮೊದಲಾದ ಮಹಾನ್ ಗ್ರಂಥಗಳ ಪಾತ್ರಗಳ ಸತ್ಯವು ಒಂದು ಪ್ರಾಂತದಿಂದ ಇನ್ನೊಂದು ಪ್ರಾಂತಕ್ಕೆ ವಿಭಿನ್ನ ಹಾಗೂ ವೈರುಧ್ಯತೆಯಿಂದ ಕೂಡಿದೆ. ನ್ಯಾಯ ಕೂಡಾ ಈ ವಿಭಿನ್ನತೆಯಿಂದ ಕೂಡಿರುವ ಕಾರಣದಿಂದಲೇ ಗಾಂಧೀಜಿ, ದೇಶದ ವೈವಿಧ್ಯಮಯ ಸಂಸ್ಕೃತಿ, ಆಚರಣೆ, ನಾಗರಿಕತೆ ಯನ್ನು ಗೌರವಿಸಿಕೊಂಡು ಭಾರತೀಯರೆಲ್ಲರೂ ಒಪ್ಪುವ ಸಮಾನತೆಯಿಂದ ಕೂಡಿದ ಸತ್ಯ, ಅಹಿಂಸೆ ಮತ್ತು ನ್ಯಾಯದ ಏಕ ಪರಿಕಲ್ಪನೆಗೆ ಒತ್ತು ನೀಡಿದ್ದರು ಎಂದವರು ಹೇಳಿದರು.
ಎರಡು ವಿಶ್ವ ಯುದ್ಧಗಳ ಅನುಭವ ಹೊಂದಿದ್ದ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ ಸಂದರ್ಭ ಭಾರತದಲ್ಲಿ ಅಧಿಕಾರದಲ್ಲಿದ್ದ ಬ್ರಿಟಿಷರು ಅತ್ಯಂತ ಬಲಶಾಲಿಯಾದ ಸೈನ್ಯ, ತಂತ್ರಜ್ಞಾನ ಹಾಗೂ ವ್ಯವಸ್ಥೆಯನ್ನು ಹೊಂದಿತ್ತು. ಏಷ್ಯಾದ ಯಾವುದೇ ರಾಷ್ಟ್ರಗಳು ಬ್ರಿಟಿಷ್ ಆಡಳಿತವನ್ನು ಸೋಲಿಸಲು ಸಾಧ್ಯವಿರಲಿಲ್ಲ. ಆದರೆ, ಗಾಂಧೀಜಿ ತಮ್ಮ ಕೈಯ್ಯಲ್ಲಿ ಉಪ್ಪನ್ನು ಹಿಡಿದು ಬ್ರಿಟಿಷರ ಬಲಶಾಲಿ ಸೈನ್ಯಕ್ಕೆ ಸೆಡ್ಡು ಹೊಡೆದಿದ್ದರು. ಅವರ ಈ ಅಹಿಂಸೆಯ ಸತ್ಯಾಗ್ರಹವು ಬ್ರಿಟಿಷರ ಹಿಂಸಾತ್ಮಕ ಸೈನ್ಯವೇ ೧೯ನೆ ಶತಮಾನದಲ್ಲಿ ತಲೆಬಾಗುವಂತೆ ಮಾಡಿದ್ದರು. ಆ ಮಾರ್ಗವೇ 21ನೆ ಶತಮಾನದಲ್ಲಿ ಮತ್ತೆ ನೆನೆಪಿಸುವಂತಾಗಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ನುಡಿದರು.
ಡಾ. ಎಚ್.ಎಸ್. ಅನುಪಮಾ ಮಾತನಾಡಿ, ಗಾಂಧೀಜಿಯ ಕಾಲದಲ್ಲಿ ಪತ್ರಿಕಾಧರ್ಮವಾಗಿದ್ದ ಮಾಧ್ಯಮವಿಂದು, ಪತ್ರಿಕಾ ರಂಗವಾಗಿ, ಪತ್ರಿಕೋದ್ಯಮವಾಗಿ ಬದಲಾಗಿದೆ. ಹಿಂದೆ ಅಧಿಕಾರದಲ್ಲಿದ್ದವರ ತಪ್ಪುಗಳನ್ನು ಜನರಿಗೆ ತಿಳಿಸಲು ಬಳಲಸಲಾ ಗುತ್ತಿದ್ದ ಮಾಧ್ಯಮದ ವ್ಯಾಖ್ಯಾನವೇ ಇಂದು ಬದಲಾಗಿದೆ ಎಂದರು.
‘ಗಾಂಧೀಜಿ ಸ್ವಾತಂತ್ರ್ಯ ಹೋರಾಟದಲ್ಲಿ ದೇಶವನ್ನು ಕಟ್ಟುವ ಸಂದರ್ಭ ಪತ್ರಿಕೋದ್ಯಮವನ್ನು ಬಳಸಿಕೊಂಡು ಪ್ರತಿಪಾದಿ ಸಿದ ಸತ್ಯ, ಅಹಿಂಸೆ, ನ್ಯಾಯದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಪತ್ರಿಕೋದ್ಯಮದಲ್ಲಿ ಮುದ್ರಣ ಮಾಧ್ಯಮ ಇಂದಿಗೂ ಮುಖ್ಯ ಗುಣಗಳನ್ನು ಉಳಿಸಿಕೊಂಡಿವೆಯಾದರೂ, ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಗಾಂಧಿ ಹೇಳಿದ, ಸತ್ಯ, ನ್ಯಾಯ ಮತ್ತು ಅಹಿಂಸೆಯನ್ನು ನಾವು ಕಾಣುತ್ತಿಲ್ಲ. ಹಿಂಸೆ ಹೆಚ್ಚಾದಷ್ಟು ಟಿಆರ್ಪಿ ಹೆಚ್ಚಾಗುತ್ತವೆ ಎಂಬ ಕಾರಣಕ್ಕೆ ಕಾರ್ಯಕ್ರಮ ನಿರ್ವಹಣೆ ಮಾಡುವ ಆ್ಯಂಕರ್ಗಳು ಆಕ್ರಮಣಕಾರಿಯಾಗಿ ವರ್ತಿಸುವುದು ಕಂಡು ಬರುತ್ತಿದೆ. ವರ್ತಮಾನ ಕಾಲದ ಮಾಧ್ಯಮದ ಈ ನಡೆಯ ಸಂದರ್ಭ ಗಾಂಧಿಯ ಮಾಧ್ಯಮದ ಕುರಿತು ಚರ್ಚಿಸಿ ವರ್ತಮಾನದ ಮಾಧ್ಯಮಕ್ಕೆ ಪೂರಕ ಸಂದೇಶ ನೀಡಬೇಕಾಗಿದೆʼ.
-ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.
ಚರ್ಚಾಗೋಷ್ಟಿಯಲ್ಲಿ ಪ್ರಮುಖರ ಮಾತಿನ ಬಳಿಕ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಪ್ರಶ್ನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಣಿಪುರದ ವಿದ್ಯಾರ್ಥಿನಿ ಪ್ರೆಸಿಲ್ಲಾ, ಮಣಿಪುರದಲ್ಲಿ ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸೆಗಳು ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಯಾಕೆ ಸುದ್ದಿಯಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಮಣಿಪುರ ಸಂಘರ್ಷದ ಸತ್ಯ ಶೋಧನೆ ನಡೆಸಿರುವ ಸಾಮಾಜಿಕ ಕಾರ್ಯಕರ್ತ ಸೆಡ್ರಿಕ್ ಪ್ರಕಾಶ್ ಪ್ರತಿಕ್ರಿಯಿಸಿ, ವಸ್ತುಸ್ಥಿತಿಯನ್ನು ತೆರೆದಿಡಲು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳಲು ಅವಕಾಶವಿದೆ ಎಂದರು.