ಸಹಕಾರಿ ಸಂಘಗಳ ಅಧಿಕಾರ ಮೊಟಕಿಗೆ ಆಕ್ಷೇಪ: ಕೋರ್ಟ್ ಮೆಟ್ಟಿಲೇರಿದ ಉಪ್ಪಿನಂಗಡಿ ಸಿಎ ಬ್ಯಾಂಕ್
ಕೆ.ವಿ. ಪ್ರಸಾದ
ಉಪ್ಪಿನಂಗಡಿ: ಸಹಕಾರಿ ತತ್ವದ ರಕ್ಷಣೆ ಹಾಗೂ ಸಹಕಾರಿ ಸಂಘಗಳ ಹಿತಕ್ಕಾಗಿ ರಾಜ್ಯ ಸರಕಾರದ ತಿದ್ದುಪಡಿ ಕಾಯ್ದೆ ಯನ್ನು ಆಕ್ಷೇಪಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು ರಾಜ್ಯ ಸರಕಾರದ ವಿರುದ್ಧ ದಾವೆ ಹೂಡಿದ್ದು, ನಮ್ಮ ಅಹವಾಲನ್ನು ಪುರಸ್ಕರಿಸಿದ ನ್ಯಾಯಾಲಯವು ಸರಕಾರದ ಈ ಕ್ರಮವನ್ನು ಸಂವಿಧಾನ ಬಾಹಿರವೆಂದು ಘೋಷಿಸಿ ತೀರ್ಪು ನೀಡಿದೆ. ಈ ಮೂಲಕ ಸಹಕಾರಿ ಸಂಘಗಳ ಮೇಲೆ ಆವರಿಸಿದ್ದ ಕರಿಮೋಡ ಸರಿದಂತಾಗಿದೆ ಎಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ತಿಳಿಸಿದರು.
ಸಹಕಾರಿ ಸಂಘಗಳಿಗೆ ಸಿಬ್ಬಂದಿ ನೇಮಕದ ಅಧಿಕಾರವನ್ನು ಕಿತ್ತು, ಸಹಕಾರಿ ಸಂಘಗಳಲ್ಲಿ ನೇಮಕಾತಿಯ ವೃಂದ ರಚನೆ, ನೇಮಕಾತಿ ಮಾಡಿಕೊಳ್ಳುವುದು, ನೌಕರರ ವರ್ಗಾವಣೆ, ನೌಕರರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ಸಹಕಾರಿ ಸಂಘಗಳ ಅಧಿಕಾರವನ್ನು ಮೊಟಕುಗೊಳಿಸಿ ಕರ್ನಾಟಕ ಸಹಕಾರ ಸಂಘಗಳ ( ತಿದ್ದುಪಡಿ ) ಕಾಯ್ದೆ 2023 ರ ಸೆಕ್ಷನ್ 128ಎ ಗೆ ತಿದ್ದುಪಡಿ ತಂದಿದ್ದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಮತ್ತಿತರರು ಸಲ್ಲಿಸಿದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಮಾನಾಥ್ ಹೆಗಡೆ ಅವರಿದ್ದ ಏಕ ಸದಸ್ಯ ಪೀಠ, ತಕರಾರು ಅರ್ಜಿಯನ್ನು ಪುರಸ್ಕರಿಸಿ, ರಾಜ್ಯ ಸರಕಾರದ ನಡೆಯನ್ನು ಸಂವಿಧಾನ ಬಾಹಿರ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ವಿ. ಪ್ರಸಾದ ಅವರು, ಸಹಕಾರಿ ತತ್ವ ಬಹಳ ಪವಿತ್ರವಾದದ್ದು, ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳನ್ನು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸದಸ್ಯರ ನಡುವೆ ಬೆಸುಗೆ ಇದ್ದು, ಒಂದೇ ಕುಟುಂಬದ ಸದಸ್ಯರೆಂಬ ಭಾವನೆಯಲ್ಲಿ ಎಲ್ಲರೂ ಒಗ್ಗೂಡಿ ಶ್ರಮಿಸುತ್ತಿರುವುದರಿಂದ ಸಹಕಾರಿ ಸಂಘಗಳು ವರ್ಷದಿಂದ ವರ್ಷಕ್ಕೆ ಲಾಭದಾಯಕ ಯಶಸ್ಸು ಕಾಣುತ್ತಿದೆ. ಈ ಉತ್ತಮ ವ್ಯವಸ್ಥೆಯನ್ನು ಸಂಪೂರ್ಣ ದಿಕ್ಕೆಡಿಸುವ ಸಾಧ್ಯತೆಯು ಸರಕಾರದ ಹೊಸ ತಿದ್ದುಪಡಿ ಕಾಯಿದೆಯಲ್ಲಿ ಕಂಡುಬಂದಿತ್ತು. ಈ ಕಾರಣಕ್ಕೆ ಸರಕಾರದ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಬೇಕಾಯಿತು ಎಂದು ತಿಳಿಸಿದ್ದಾರೆ.
ಒಂದು ಸಂಸ್ಥೆಯಲ್ಲಿ ಸಿಬ್ಬಂದಿಯ ಮೇಲೆ ಆಡಳಿತ ಮಂಡಳಿಗೆ ಯಾವುದೇ ಹಿಡಿತವಿಲ್ಲವೆಂದ ಮೇಲೆ ಆ ಸಂಸ್ಥೆ ಯಾವ ಮಟ್ಟಕ್ಕೆ ಹೋಗಬಹುದೆನ್ನುವುದಕ್ಕೆ ನಿದರ್ಶನಗಳಿಗೆ ಕೊರತೆ ಇಲ್ಲ. ಸಹಕಾರಿ ಸಂಘದಲ್ಲಿ ಎಲ್ಲವೂ ಸರಕಾರ ಕೇಂದ್ರಿತ ವ್ಯವಸ್ಥೆಯಲ್ಲಿ ನಡೆಯುವುದಾದರೆ ಅದಕ್ಕೆ ಸಹಕಾರಿ ಸಂಘ ಎನ್ನಲಾಗದು. ಬದಲಾಗಿ ಅದು ಸರಕಾರಿ ಸಂಸ್ಥೆಯಾಗಿಯೇ ಪರಿಗಣಿಸಲ್ಪಡುತ್ತದೆ. ಸ್ಥಳೀಯ ಜನತೆ ಪರಸ್ಪರ ಒಗ್ಗೂಡಿಕೊಂಡು ಕಾನೂನುಬದ್ದ ಕಾರ್ಯಚಟುವಟಿಕೆಯನ್ನು ನಡೆಸುತ್ತಾ ಹಾಗೂ ನಿರ್ವಹಣೆ ಮಾಡುತ್ತಾ ಬಂದಿರುವಾಗ ಅದರ ಸಿಬ್ಬಂದಿ ನೇಮಕ , ವರ್ಗಾವಣೆ, ಶಿಸ್ತು ಕ್ರಮ ಮೊದಲಾದ ಮೂಲ ಭೂತ ವಿಚಾರಗಳಲ್ಲಿ ಸಹಕಾರಿ ಸಂಘದ ಆಡಳಿತದ ಹಕ್ಕನ್ನು ಮೊಟಕುಗೊಳಿಸಿ , ಅದನ್ನು ತನ್ನ ಸ್ವಾಮ್ಯತೆಗೆ ಒಳಪಡಿಸುವ ಪ್ರಯತ್ನದಡಿ ಈ ಕಾಯಿದೆ ರೂಪಿತವಾಗಿದೆ. ಸಹಕಾರಿ ಸಂಸ್ಥೆಗಳ ಹಿತ ರಕ್ಷಣೆಗಾಗಿ ನಡೆಸಿದ ಹೋರಾಟ ದಲ್ಲಿ ಘನ ನ್ಯಾಯಾಲಾಯವು ನಮ್ಮ ಅಹವಾಲನ್ನು ಮಾನ್ಯ ಮಾಡಿರುವುದಲ್ಲದೆ, ರಾಜ್ಯ ಸರಕಾರದ ನಡೆಯನ್ನು ಸಂವಿಧಾನ ಬಾಹಿರವೆಂದು ಘೋಷಿಸುವ ಮೂಲಕ ಎಲ್ಲಾ ಸಹಕಾರಿ ಸಂಘ ಸಂಸ್ಥೆಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಫಲಪ್ರಧವಾಗಿರುವುದು ನಮಗೆ ಸಂತಸವನ್ನು ತಂದಿದೆ. ಸಹಕಾರಿ ತತ್ವದ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಅಳಿಲ ಸೇವೆ ಇದಾಗಿದೆ ಎಂದು ಕೆ ವಿ ಪ್ರಸಾದ ವಿವರಿಸಿದ್ದಾರೆ.