ಗುಂಡುಕಲ್ಲು ಜುಮಾ ಮಸ್ಜಿದ್ : ಚುನಾವಣೆ ಮುಂದೂಡಿಕೆ
ಮೂಡುಬಿದಿರೆ, ಅ.2: ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಮೊಹಿಯುದ್ದೀನ್ ಜುಮಾ ಮಸ್ಜಿದ್ನ ಆಡಳಿತ ಸಮಿತಿಗೆ ಅ.3ರಂದು ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
ಈ ಮೊದಲು ಚುನಾವಣೆ ಸೆ.29ರಂದು ನಿಗದಿಯಾಗಿತ್ತು. ಆದರೆ ರಾಜ್ಯ ವಿಧಾನ ಪರಿಷತ್ನ ದಕ್ಷಿಣ ಕನ್ನಡ ಕ್ಷೇತದ ಉಪಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಇದೀಗ ಅ.3ರಂದು ಚುನಾವಣೆ ನಡೆಸಲು ಜಿಲ್ಲಾ ವಕ್ಫ್ ಅಧಿಕಾರಿ ಅವರು ಅನುಮತಿ ಕೋರಿ ಮೂಡಬಿದಿರೆ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಅವರ ಕಚೇರಿಗೆ ಮನವಿ ಮಾಡಿದ್ದರು.
ಈ ನಡುವೆ ಗುಂಡುಕಲ್ಲು ಮೊಹಿಯುದ್ದೀನ್ ಜುಮಾ ಮಸ್ಜಿದ್ನ 30 ಸದಸ್ಯರು ಚುನಾವಣೆ ನಡೆಸಬಾರದೆಂದು ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಈ ಮೊಕದ್ದೆಮೆಯು ವಿಚಾರಣೆಯಲ್ಲಿರುತ್ತದೆ. ಮಸೀದಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಇರುವುದರಿಂದ ಸ್ಥಳದಲ್ಲಿ ಶಾಂತಿ ಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂಬ ವರದಿಯನ್ನು ಪೊಲೀಸ್ ಅಧಿಕಾರಿ ನೀಡಿರುವ ಹಿನ್ನೆಲೆಯಲ್ಲಿ ಮತ್ತು ದಕ್ಷಿಣ ಕನ್ನಡ ಸ್ಥಳೀಯ ಕ್ಷೇತ್ರಕ್ಕೆ ವಿಧಾನ ಪರಿಷತ್ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಸೀದಿಯ ಚುನಾವಣೆಯನ್ನು ಮುಂದೂಡುವಂತೆ ಮೂಡಬಿದಿರೆ ತಹಶೀಲ್ದಾರ್ ಆದೇಶ ನೀಡಿದ್ದಾರೆ.