ಬಂಟ್ವಾಳ: ಕುಸಿದು ಬಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಮೃತ್ಯು
ಬಂಟ್ವಾಳ: ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕರ್ತವ್ಯದಲ್ಲಿರುವಾಗಲೇ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವೀರಕಂಬ ಸಮೀಪದ ಮಜ್ಜೋನಿ ನಿವಾಸಿ ಜಯರಾಮ ಮೂಲ್ಯ ಮೃತಪಟ್ಟವರು. ಅವರು ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.
ಅ ಬಳಿಕ ಇವರು ಇಲಾಖೆಯೊಳಗೆ ಒಬ್ಬನೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.
ಶನಿವಾರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ಬೆಳಕಿಗೆ ಬಂದಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ, ಪರೀಕ್ಷೆ ನಡೆಸಿದಾಗ ಅವರು ಮೃತಪಟ್ಟ ಬಗ್ಗೆ ಇಲ್ಲಿನ ವೈದ್ಯರು ತಿಳಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರು ತಾಯಿ ಹಾಗೂ ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.