ಪಾಣೆಮಂಗಳೂರಿನ ನೇತ್ರಾವತಿ ಒಳ ರಸ್ತೆಗೆ ನೂತನ ಸೇತುವೆ ನಿರ್ಮಿಸಲು ಮನವಿ

ಬಂಟ್ವಾಳ: ಪಾಣೆಮಂಗಳೂರು ಪೇಟೆಗೆ ಸಂಪರ್ಕ ಹೊಂದುವ ಬ್ರಿಟಿಷರ ಕಾಲದ ಹಳೆ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಘನ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ದಿನದಿಂದ ದಿನಕ್ಕೆ ಇದು ಬಿರುಕು ಬಿಡುತ್ತಿದೆ. ಹಾಗಾಗಿ ಪಾಣೆಮಂಗಳೂರಿನ ನೇತ್ರಾವತಿ ಒಳ ರಸ್ತೆಗೆ ನೂತನ ಸೇತುವೆ ನಿರ್ಮಿಸಲು ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಶ್ ಅಲಿ ನೇತೃತ್ವದ ನಿಯೋಗವು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ.
ಬಂಟ್ವಾಳ ಪುರಸಭೆಯ ಆಡಳಿತವು ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಸೇತುವೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕ ಕಬ್ಬಿಣದ ಕಮಾನ್ ಅಳವಡಿಸಿದೆ. ಇದರಿಂದ ಘನ ವಾಹನಗಳು ಸಂಚರಿಸಿ ಕಮಾನುಗಳಿಗೆ ಢಿಕ್ಕಿಯಾದ ಪರಿಣಾಮ ಹಲವು ಅಪಘಾತಗಳು ಸಂಭವಿಸಿವೆ. ಹಾಗಾಗಿ ಈ ಸೇತುವೆಯನ್ನು ಸ್ಮಾರಕವಾಗಿ ಉಳಿಸಿ ಸ್ಥಳೀಯರಿಗೆ ಬಹು ಉಪಯೋಗವಿರುವ ಪಕ್ಕದಲ್ಲೇ ಮತ್ತೊಂದು ಸಂಚಾರ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದೆ.
ನಿಯೋಗದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಅಲಿ, ಜೊತೆ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ, ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ., ಸಂಶಾದ್ ಗೂಡಿನಬಳಿ ಉಪಸ್ಥಿತರಿದ್ದರು.