ಶಾಸಕ ಮಂಕಾಳ ವೈದ್ಯರ ಗುಂಡೇಟು ಹೇಳಿಕೆ ಗೋಮಾಂಸ ರಫ್ತುದಾರರಿಗೆ ಅನ್ವಯಿಸದಿರಲಿ: ಕೆ.ಅಶ್ರಫ್

ಕೆ.ಅಶ್ರಫ್
ಮಂಗಳೂರು: ಇತ್ತೀಚೆಗೆ ಶಾಸಕ ಮಂಕಾಳ ವೈದ್ಯ ಘಟನೆಯೊಂದಕ್ಕೆ ಸಂಬಂಧಿಸಿ, ಉದ್ವಿಗ್ನ ಹೇಳಿಕೆ ನೀಡಿ ಗೋಹತ್ಯೆ ದಾರರನ್ನು ಸರ್ಕಲ್ ನಲ್ಲಿ ಗುಂಡೇಟು ಹೊಡೆದು ಸಾಯಿಸಬೇಕು ಎಂದಿದ್ದಾರೆ. ಮಂಕಾಳ ವೈದ್ಯ ಅವರ ಹೇಳಿಕೆ ವಿವಿಧ ದೃಷ್ಟಿ ಕೋನವನ್ನು ಹೊಂದಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಅವರು ಹೇಳಿದ್ದಾರೆ.
ಮಂಕಾಳ ವೈದ್ಯ ಅವರ ಹೇಳಿಕೆ ಭಾರತದಲ್ಲಿನ ಯಾವುದೇ ಘಟನೆಯನ್ನು ಉದ್ದೇಶಿಸಿ ಹೇಳಿದಂತಿಲ್ಲ. ಮಂಕಾಳ ಅವರಿಗೆ, ಇತರ ದೇಶಗಳಿಗೆ ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತವು ಒಂದನೇ ಸ್ಥಾನದಲ್ಲಿರುವ ಬಗ್ಗೆ ಅರಿವಿದೆ. ಅದರಲ್ಲಿಯೂ ಗೋವುಗಳನ್ನು ಯಾಂತ್ರೀಕೃತವಾಗಿ ವಧೆ ಮಾಡುವುದರ ಬಗ್ಗೆ ಕೂಡಾ ಅರಿವಿದೆ.
ಮಂಕಾಳ ರವರಿಗೆ ಇತ್ತೀಚೆಗೆ ಭಾರತದ ಗೋವುಗಳ ಬಗ್ಗೆ ಪ್ರೀತಿ ಉಕ್ಕಿ ಹರಿದು, ಅವರು ಗೋಮಾಂಸ ರಫ್ತು ಮಾಡುವ ಉದ್ಯಮಿಗಳನ್ನು ಗುರಿ ಮಾಡಿ ಈ ಹೇಳಿಕೆ ನೀಡಿದಂತಿದೆ. ಇದು ಸರಿಯಲ್ಲ. ಮಂಕಾಳ ಅವರು ಗೋಮಾಂಸ ರಫ್ತು ಮಾಡುವ ವ್ಯಕ್ತಿಗಳನ್ನು ಗುರಿಯಾಗಿಸಿ ಇಂತಹ ಹೇಳಿಕೆ ನೀಡಬಾರದಿತ್ತು.
ಭಾರತದ ಜನರು ತಮ್ಮ ದೇಶದಲ್ಲಿ ಲಭ್ಯವಾಗುವ ಗೋಮಾಂಸದಂತಹ ಪೌಷ್ಟಿಕ ಆಹಾರವನ್ನು ತಿನ್ನದೆ ಅದನ್ನು ತ್ಯಜಿಸಿ ವಿದೇಶಕ್ಕೆ ರಫ್ತು ಮಾಡುವುದರ ಮೂಲಕ ಮಾಡುವ ತ್ಯಾಗವನ್ನು ಗೌರವಿಸಬೇಕಿತ್ತು. ಮಂಕಾಳ ವೈದ್ಯರು ಗೋಮಾಂಸ ರಫ್ತುದಾರರ ವಿರುದ್ಧ ನೀಡಿದ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು. ಹಿರಿಯ ರಫ್ತು ಉದ್ಯಮಿಗಳನ್ನು ಈ ರೀತಿಯಲ್ಲಿ ಸಂಭೋಧಿಸುವುದು ಮಂಕಾಳ ವೈದ್ಯರಿಗೆ ಶೋಭೆ ತರುವಂತಹದ್ದಲ್ಲ. ಭಾರತದಲ್ಲಿಯೇ ಕೇರಳ ರಾಜ್ಯದಂತೆ ಉತ್ತಮ ಗೋಮಾಂಸ, ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಹಾಗೂ ಕರ್ನಾಟಕದಿಂದ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಷೇಧಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಆಗ್ರಹಿಸಲಿ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.