ಸುರತ್ಕಲ್: ಜವಳಿ ಮಳಿಗೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ

ಸುರತ್ಕಲ್: ಇಲ್ಲಿನ ಪೂವ ಆರ್ಕೆಡ್ ನಲ್ಲಿ ಕಾರ್ಯಾಚರಿಸುತ್ತಿರುವ ಮೈ ಚಾಯ್ಸ್ ಬಟ್ಟೆ ವಿನ್ಯಾಸ ಹಾಗೂ ಜವಳಿ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಸಂಭವಿಸಿರುವ ಘಟನೆ ಬುಧವಾರ ತಡರಾತ್ರಿ 1ರ ಸುಮಾರಿಗೆ ನಡೆದಿದೆ.
ಕೃಷ್ಣಾಪುರ ನಿವಾಸಿ ಶಮೀಮ್ ಎಂಬವರಿಗೆ ಸೇರಿದ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದ್ದು, ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬಟ್ಟೆ ಬರೆಗಳು ಹಾಗೂ ಯಂತ್ರೋಪಕರಣಗಳು ಸೇರಿ ಕೋಟಿ ರೂ. ಅಧಿಕ ಮೌಲ್ಯದ ಸೊತ್ತು ಸುಟ್ಟು ಕರಕಲಾಗಿದೆ ಎಂದು ಹೇಳಲಾಗಿದೆ.
ಅಂಗಡಿಯ ಮೇಲ್ಛಾವಣಿಯಲ್ಲಿನ ಬಟ್ಟೆ ವಿನ್ಯಾಸ ವಿಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಯನ್ನು ಸುಟ್ಟು ಭಸ್ಮ ಮಾಡಿತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಮೂರು ಮತ್ತು ಎಂಆರ್ ಪಿಎಲ್ ನ ಒಂದು ಅಗ್ನಿ ನಿರೋಧಕ ವಾಹನಗಳು ಸತತ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





