ನೈಜ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಖಾತ್ರಿಗೊಳಿಸಲು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ

ಮಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿ ದುಡಿದು 60 ವರ್ಷ ಪೂರ್ಣವಾದ ನಂತರದಲ್ಲಿ ಪಡೆಯುವ ಪಿಂಚಣಿಯು ಸಮಯಕ್ಕೆ ಸರಿಯಾಗಿ ಲಭಿಸದೆ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಸುಮಾರು 20 ತಿಂಗಳಿ ನಿಂದ ಪಿಂಚಣಿಗಾಗಿ ಅರ್ಜಿ ಹಾಕಿ ಮಂಜೂರು ಆದೇಶ ನೀಡಿದ್ದರೂ ಕೂಡ ಪಿಂಚಣಿ ಲಭಿಸುತ್ತಿಲ್ಲ. ಕಲ್ಯಾಣ ಮಂಡಳಿ ಯಲ್ಲಿರುವ ನಿಧಿಯನ್ನು ವಿವಿಧ ಕಿಟ್ ಯೋಜನೆಗಳಿಗೆ ದುರ್ಬಳಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ದ.ಕ.ಜಿಲ್ಲಾಧ್ಯಕ್ಷ ವಸಂತ ಆಚಾರ್ಯ ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ನೇತೃತ್ವದಲ್ಲಿ ಸೋಮವಾರ ನಡೆದ 60 ವರ್ಷ ಮೀರಿದ ಪಿಂಚಣಿ ಸೌಲಭ್ಯಗಳಿಂದ ವಂಚಿತರು ಮತ್ತು ಪಿಂಚಣಿಗಾಗಿ ಕಾಯುತ್ತಿರುವ ಹಿರಿಯ ಕಟ್ಟಡ ಕಾರ್ಮಿಕರ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.
ಫೆಡರೇಶನ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜೆಪ್ಪಿನಮೊಗರು, ಕಟ್ಟಡ ಕಾರ್ಮಿಕರ ಫೆಡರೇಶನ್‌ನ ಉಪಾಧ್ಯಕ್ಷ ಜನಾರ್ದನ್ ಕುತ್ತಾರು, ವಸಂತಿ ಕುಪ್ಪೆಪದವು ಮಾತನಾಡಿದರು.
ಪಿಂಚಣಿದಾರರ ಸಂಘಟನೆಯ ಮುಖಂಡರಾದ ರಾಮಚಂದ್ರ ಪಜೀರ್, ದಿನೇಶ್ ಶೆಟ್ಟಿ ಜಪ್ಪಿನಮೊಗರು, ಯಶೋದ ಮಳಲಿ, ರೋಹಿದಾಸ್ ಭಟ್ಟನಗರ, ಅಶೋಕ್ ಶ್ರೀಯಾನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ಡಿಸೋಜ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.