ಪುತ್ತೂರು | ಲಾರಿಯಿಂದ 80 ಕಾಫಿ ಚೀಲ ಕಳ್ಳತನ : ಐವರು ಆರೋಪಿಗಳ ಬಂಧನ

ಪುತ್ತೂರು: ಮಂಗಳೂರಿಗೆ ಕಾಫಿ ಬೀಜದ ಲೋಡು ಕೊಂಡೊಯ್ಯುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಪುತ್ತೂರು ನಿವಾಸಿ ಆಶ್ಲೇಷ ಭಟ್ ಹಾಗೂ ಅವರ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಮತ್ತು ಮುಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 80 ಕಾಫಿ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ತಾಲೂಕಿನ ಕಬಕ ನಿವಾಸಿ ತೃತೇಶ್ ಎಂಬವರು ನೀಡಿದ ದೂರಿನಂತೆ, ಡಿ.3ರಂದು ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆ.ಜಿ ತೂಕದ 320 ಬ್ಯಾಗ್‌ಗಳನ್ನು KA 19 AB 2258 ಲಾರಿಯಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿಗೆ ತೆರಳುವ ವೇಳೆ, ರಾತ್ರಿ ಪುತ್ತೂರಿನ ಕಬಕ ನೆಹರೂ ನಗರದಲ್ಲಿ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಡಿ.4ರಂದು ಮಂಗಳೂರಿನ ಬಂದರಿಗೆ ತಲುಪಿದಾಗ ಲಾರಿಯ ಹಿಂಭಾಗದ ಸೀಲ್ ತುಂಡಾಗಿದ್ದು, ತಪಾಸಣೆ ವೇಳೆ 21,44,000 ರೂ. ಮೌಲ್ಯದ 80 ಗೋಣಿ ಚೀಲಗಳು ಕಾಣೆಯಾಗಿರುವುದು ತಿಳಿದು ಬಂದಿತ್ತು.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋ ಹಾಗೂ ಕಳವಾದ 80 ಕಾಫಿ ಚೀಲಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.







