ಯುನಿವೆಫ್ | ಬಿ.ಸಿ.ರೋಡ್ ನಲ್ಲಿ ಸೀರತ್ ಸಮಾವೇಶ

ಬಿಸಿರೋಡ್ : ಯುನಿವೆಫ್ ಕರ್ನಾಟಕದ ವತಿಯಿಂದ ಸೆ19ರ 2025ರಿಂದ ಜ.2ರ 2026 ರ ವರೆಗೆ “ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20ನೇ ವರ್ಷದ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನದ ಸೀರತ್ ಸಮಾವೇಶವು ಬಿ.ಸಿ.ರೋಡ್ ನ ಪೂಂಜಾ ಗ್ರೌಂಡ್ ನಲ್ಲಿ ನಡೆಯಿತು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು, “ಶೋಷಣೆಯ ವಿರುದ್ಧ ಪ್ರವಾದಿ (ಸ)ಯ ನಡೆ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ "ಇಸ್ಲಾಮ್ ಮತ್ತು ಅದರ ಪ್ರವಾದಿ (ಸ) ರ ಮೇಲಿರುವ ಆಕ್ಷೇಪಣೆಗಳಿಗೆ ಸಮರ್ಪಕ ಉತ್ತರ ನೀಡಿ ಅಪಕಲ್ಪನೆ ಮತ್ತು ಸಂಶಯಗಳನ್ಜು ನೀಗಿಸುವ ನಿಟ್ಟಿನಲ್ಲಿ ಯುವಜನತೆ ಕಾರ್ಯಾಚರಿಸಬೇಕಾಗಿದೆ. ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹರಿಸಿದ ಪ್ರವಾದಿ (ಸ) ರ ಅನುಯಾಯಿಗಳು ಇಂದು ಅಜ್ಞಾನದಲ್ಲೇ ತೊಳಲಾಡುತ್ತಿದ್ದು, ಸಮುದಾಯ ಜಾಗೃತಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಯುನಿವೆಫ್ ಕರ್ನಾಟಕ ಸತತ ಪರಿಶ್ರಮ ಪಡುತ್ತಿದೆ" ಎಂದು ಹೇಳಿದರು.
ಜಮೀಅತುಲ್ ಫಲಾಹ್ ಬಂಟ್ವಾಳ ತಾಲೂಕು ಇದರ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಮತ್ತು ಅನಿವಾಸಿ ಉದ್ಯಮಿ ಜನಾಬ್ ಅಬ್ದುರ್‍ರಹೀಮ್ ಖತರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಿಶಾಮ್ ಮುಹಮ್ಮದ್ ಹನೀಫ್ ಕಿರಾಅತ್ ಪಠಿಸಿದರು. ಮುಹಮ್ಮದ್ ಆಸಿಫ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಉಪಸ್ಥಿತರಿದ್ದರು.





