ಉರ್ವ ಠಾಣೆಯ ಕಾನ್ಸ್ಟೇಬಲ್ ಕೊಲೆಯತ್ನ: ಪ್ರಕರಣ ದಾಖಲು
ಮಂಗಳೂರು, ಅ.1: ಕರ್ತವ್ಯ ನಿರತ ಉರ್ವ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವೆಂಕಟೇಶ್ ಅವರನ್ನು ತಂಡವೊಂದು ಕೊಲೆಗೆ ಯತ್ನಿಸಿದ ಘಟನೆ ರವಿವಾರ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸೆ.29ರ ರಾತ್ರಿ ಸುಮಾರು 10:30ಕ್ಕೆ ಎಚ್ಸಿ ಪುಷ್ಪರಾಜ ಅವರು ಕೊಟ್ಟಾರ ಚೌಕಿಯ ಕೋಸ್ಟಲ್ ಬಾರ್ ಹಿಂಬದಿಯಲ್ಲಿರುವ ಕರಾವಳಿ ಕಾಲೇಜು ಪಿಜಿಯ ಬಳಿ ಗಲಾಟೆ ನಡೆಯುತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ತಾನು ಠಾಣೆಯಲ್ಲಿದ್ದ ಬೀಟ್ ಕರ್ತವ್ಯ ಕಾನ್ಸ್ಟೇಬಲ್ ಬಾಳೆಗೌಡ ಮೊಕಾಶಿ ಮತ್ತು ಎಚ್.ಜಿ. ರೋಹಿದಾಸ್ರಿಗೆ ಮಾಹಿತಿ ನೀಡಿ ಬೈಕ್ನಲ್ಲಿ ಸ್ಥಳಕ್ಕೆ 10:40ಕ್ಕೆ ತಲುಪಿದೆ. ಪಿಜಿಯ ಎದುರುಗಡೆ 7-8 ಮಂದಿ ಯುವಕರು ಬೈದಾಡುತ್ತಾ ಪಿಜಿಯ ಕಿಟಕಿಯ ಗಾಜಿಗೆ ಕಲ್ಲಿನಿಂದ ಹೊಡಿಯುತಿದ್ದರು. ಸಮವಸ್ತ್ರದಲ್ಲಿದ್ದ ತನ್ನನ್ನು ಯುವಕರು ತುಳುವಿನಲ್ಲಿ ಬೈದಿದ್ದಾರೆ. ನೋಡಿ ಪರಿಚಯವಿರುವ ಅವಿನಾಶ ಎಂಬಾತನು ಅಲ್ಲೆ ಇದ್ದ ಕಲ್ಲೊಂದನ್ನು ಹೆಕ್ಕಿ ತನ್ನ ತಲೆಗೆ ಬಿಸಾಡಿದ್ದಾನೆ. ಬಲಗಣ್ಣಿನ ಹಣೆಯ ಬಳಿ ಕಲ್ಲು ಬಿದ್ದು ರಕ್ತಗಾಯವಾಗಿದೆ. ಅಲ್ಲಿಯೇ ಇದ್ದ ಸುಮನ್ ಮತ್ತು ರೋಹನ್ ಎಂಬವರು ಕೂಡ ಕೊಲೆ ಮಾಡುವ ಉದ್ದೇಶದಿಂದ ಕಲ್ಲನ್ನು ತಲೆಗೆ ಗುರಿ ಮಾಡಿ ಹೊಡೆದಿದ್ದು, ಆವಾಗಲೂ ತಪ್ಪಿಸಿಕೊಂಡೆ. ತನ್ನ ಬೊಬ್ಬೆ ಕೇಳಿ ಸ್ಥಳಕ್ಕೆ ಬಂದಿದ್ದ ಸಹೋದ್ಯೋಗಿಗಳಾದ ಬಾಳೆಗೌಡ ಮೊಕಾಶಿ ಮತ್ತು ರೋಹಿದಾಸ್ ಹಾಗೂ ಕೋಸ್ಟಲ್ ಬಾರ್ನ ಚಂದ್ರು ಎಂಬವರನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.