ದಿಲ್ಲಿಯಲ್ಲಿ ದಟ್ಟ ಮಂಜು: 110 ವಿಮಾನಗಳು, 25 ರೈಲುಗಳ ಪ್ರಯಾಣದ ಮೇಲೆ ಪ್ರತಿಕೂಲ ಪರಿಣಾಮ
Photo: NDTV
ಹೊಸದಿಲ್ಲಿ: ಬುಧವಾರ ಉತ್ತರ ಭಾರತದಾದ್ಯಂತ ದಟ್ಟ ಮಂಜು ಆವರಿಸಿರುವುದರಿಂದ, ಗೋಚರ ಸಾಮರ್ಥ್ಯವು ಕೇವಲ 25 ಮೀಟರ್ಗೆ ಕುಸಿದಿದ್ದು, ಇದರಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಬೇಕಿದ್ದ ಸುಮಾರು 110 ವಿಮಾನಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಶೀತ ಮಾರುತ ಪರಿಸ್ಥಿತಿ ಮುಂದುವರಿದಿದ್ದು, ರಾಜಧಾನಿಯಾದ್ಯಂತ ಭಾರಿ ಪ್ರಮಾಣ ಮಂಜು ಬೀಳಲಿದೆ ಎಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ಇದರಿಂದಾಗಿ ದಿಲ್ಲಿಗೆ ಆಗಮಿಸಬೇಕಿದ್ದ ಸುಮಾರು 25 ರೈಲುಗಳು ವಿಳಂಬಗೊಂಡಿವೆ ಉತ್ತರ ರೈಲ್ವೆ ವಲಯ ತಿಳಿಸಿದೆ ಎಂದು ndtv.com ವರದಿ ಮಾಡಿದೆ.
ದಾರಿಯುದ್ದಕ್ಕೂ ಮಂಜು ಮುಸುಕಿರುವುದರಿಂದ ಉತ್ತರ ಪ್ರದೇಶದಾದ್ಯಂತ ಸರಣಿ ಅಪಘಾತ ಸಂಭವಿಸಿದೆ. ಆಗ್ರಾ-ಲಕ್ನೊ ಎಕ್ಸ್ಪ್ರೆಸ್ ವೇಯಲ್ಲಿ ಸರಣಿ ಅಪಘಾತ ಸಂಭವಿಸಿದ್ದರಿಂದಾಗಿ, ಓರ್ವ ವ್ಯಕ್ತಿ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬರೇಲಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಒಂದು ಬರೇಲಿ-ಸುಲ್ತಾನ್ಪುರ್ ಹೆದ್ದಾರಿ ಬಳಿಯ ಮನೆಯೊಂದಕ್ಕೆ ನುಗ್ಗಿದೆ.
ಪಂಜಾಬ್, ಹರ್ಯಾಣ, ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಂದಾಜಿಸಿದೆ.