ನ್ಯಾಯಾಧೀಶರ ನಕಲಿ ವಾಟ್ಸ್ ಆ್ಯಪ್ ಪ್ರೊಫೈಲ್ ರಚಿಸಿದ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಬಿಹಾರ ಐಪಿಎಸ್ ಅಧಿಕಾರಿ
ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ (Photo: indiatoday.in)
ಪಾಟ್ನಾ: ಪಾಟ್ನಾ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಗಳ ನಕಲಿ ವಾಟ್ಸ್ಯಾಪ್ ಪ್ರೊಫೈಲ್ ರಚಿಸಿದ ಆರೋಪ ಎದುರಿಸುತ್ತಿರುವ ಐಪಿಎಸ್ ಅಧಿಕಾರಿ ಆದಿತ್ಯ ಕುಮಾರ್ ಅವರು ಮಂಗಳವಾರ ಪಾಟ್ನಾದ ನ್ಯಾಯಾಲಯವೊಂದರ ಮುಂದೆ ಶರಣಾಗಿದ್ದಾರೆ.
ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದ 2011 ಬ್ಯಾಚಿನ ಐಪಿಎಸ್ ಆಧಿಕಾರಿಯಾಗಿರುವ ಆದಿತ್ಯ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಅವರು ಶರಣಾಗಿದ್ದಾರೆ.
ಎಸ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿಯಾಗಿರುವ ಕುಮಾರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ಪ್ರೊಫೈಲ್ ಚಿತ್ರ ಹೊಂದಿರುವ ನಕಲಿ ವಾಟ್ಸ್ ಆ್ಯಪ್ ಖಾತೆಯ ಮೂಲಕ ಆಗಿನ ಬಿಹಾರ ಡಿಜಿಪಿ ಎಸ್ ಕೆ ಸಿಂಘಾಲ್ ಅವರನ್ನು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.
ಪ್ರಕರಣದ ಸಹ-ಆರೋಪಿಯೊಬ್ಬರು ಬಿಹಾರದ ಡಿಜಿಪಿಯನ್ನು ಈ ವಾಟ್ಸ್ ಆ್ಯಪ್ ಸಂಖ್ಯೆಯ ಮೂಲಕ ಸಂಪರ್ಕಿಸಿ ಮದ್ಯ ಮಾಫಿಯಾಗಳೊಂದಿಗೆ ನಂಟು ಹೊಂದಿರುವ ಪ್ರಕರಣ ಎದುರಿಸುತ್ತಿರುವ ಕುಮಾರ್ ವಿರುದ್ಧದ ಕೇಸ್ ಕೈಬಿಡುವಂತೆ ಸೂಚಿಸಿದ್ದ.
ಕೆಳಗಿನ ಹಂತದ ನ್ಯಾಯಾಲಯಗಳು ಕುಮಾರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ನಂತರ ಆತ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ. ಅಲ್ಲಿಯೂ ಅರ್ಜಿ ತಿರಸ್ಕೃತಗೊಂಡು ಆತನಿಗೆ ಎರಡು ವಾರಗಳೊಳಗಾಗಿ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಲಾಗಿತ್ತು,
ಪ್ರಕರಣದ ಗಂಭೀರತೆ ಹಾಗೂ ಆರೋಪಗಳ ಗಂಭೀರತೆ ಹಾಗೂ ತನಿಖೆಗೆ ಅಸಹಕಾರ ನೀಡಿರುವುದರಿಂದ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ, ಅನಿರುದ್ಧ ಬೋಸ್ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರ ಪೀಠ ಹೇಳಿದೆ.
ಡಿಸೆಂಬರ್ 12ರಂದು ಮುಂದಿನ ವಿಚಾರಣೆ ನಡೆಯುವಾಗ ಈ ಕ್ರಿಮಿನಲ್ ಪ್ರಕರಣದ ಸಂಪೂರ್ಣ ಕೇಸ್ ಡೈರಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.