ಅಸೆಂಬ್ಲಿ, ಸಂಸತ್ ಚುನಾವಣೆಗಳಲ್ಲಿ ಯಾವುದೇ ಮಟ್ಟಕ್ಕೆ ಇಳಿಯಲು ಬಿಜೆಪಿ ಸಿದ್ಧವಿದೆ : ಕೇಜ್ರಿವಾಲ್ ವಾಗ್ದಾಳಿ
ಅರವಿಂದ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ವಂಚನೆ ನಡೆಸಬಹುದಾದರೆ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅದು ಯಾವುದೇ ಮಟ್ಟಕ್ಕೂ ಹೋಗಬಹುದಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಆಕ್ರಮವೆಸಗಿದೆಯೆಂದು ಆರೋಪಿಸಿ, ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಆಮ್ ಆದ್ಮಿ ಪಕ್ಷದ ಪ್ರತಿಭಟನಾ ಸಭೆಲ್ಲಿ ಅವರು ಮಾತನಾಡುತ್ತಿದ್ದರು.
‘‘ಜಗತ್ತಿನ ಅತಿ ದೊಡ್ಡ ಪಕ್ಷವು ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಗಳನ್ನು ಕದಿಯುತ್ತಿರುವಾಗ ಕ್ಯಾಮರಾದಲ್ಲಿ ಸಿಕ್ಕಿ ಬಿದ್ದಿದೆ’’ಎಂದು ಕೇಜ್ರಿವಾಲ್ ಟೀಕಿಸಿದರು.
‘‘ಬಿಜೆಪಿಯು ಚುನಾವಣೆಯಲ್ಲಿ ವಂಚನೆಯೆಸಗುತ್ತಿದೆಯೆಂಬುದನ್ನು ನಾವು ಕಳೆದ ಕೆಲವು ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ. ಅವರು ಇವಿಎಂಗಳನ್ನು ತಿರುಚುತ್ತಾರೆ, ಮತದಾರರಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಿಹಾಕುತ್ತಿದ್ದಾರೆ. ಆದರೆ ಎಂದಿಗೂ ಈ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ. ಆದರೆ ಚಂಡೀಗಢದಲ್ಲಿ ಮತಗಳನ್ನು ಕದಿಯುವಾಗ ಅವರು ನೇರವಾಗಿ ಸಿಕ್ಕಿಬಿದ್ದಿದ್ದಾರೆ’’ ಎಂದು ಕೇಜ್ರಿವಾಲ್ ಆಪಾದಿಸಿದರು.
‘‘ಚಂಡೀಗಢ ಮೇಯರ್ ಚುನಾವಣೆಯಲ್ಲಿಯೇ ಅವರು ಅಕ್ರಮಗಳನ್ನು ಎಸಗುತ್ತಾರಾದರೆ, ಲೋಕಸಭಾ ಹಾಗೂ ಅಸೆಂಬ್ಲಿ ಚುನಾವಣೆಗಳಲ್ಲಿ ಅವರು ಏನು ಮಾಡಬಹುದು?. ಅವರು ಅಧಿಕಾರಕ್ಕಾಗಿ ದೇಶವನ್ನೇ ಮಾರಲೂಬಹುದು. ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ದೇಶವನ್ನು ಹಾಗೂ ಪ್ರಜಾಪ್ರಭುತ್ವವನ್ನು ನಾವು ರಕ್ಷಿಸಬೇಕಾಗಿದೆ’’ ಎಂದು ಕೇಜ್ರಿವಾಲ್ ತಿಳಿಸಿದರು.