ಕಪ್ಪುಹಣ ಬಿಳುಪು ಪ್ರಕರಣ: ಈಡಿ ಕಾರ್ಯಾಚರಣೆ
ಮದುರೈ ಮೂಲದ ಕಂಪೆನಿಯ 207 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು
Photo: PTI
ಹೊಸದಿಲ್ಲಿ: ತಮಿಳುನಾಡಿನ ಮದುರೈ ಮೂಲದ ಉದ್ಯಮಸಮೂಹವೊಂದು ನಡೆಸಿದೆಯೆನ್ನಲಾದ ಕಪ್ಪುಹಣ ಬಿಳುಪು ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ರವಿವಾರ 207 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿದೆ.
ತಮಿಳುನಾಡು ಪೊಲೀಸರ ಆರ್ಥಿಕ ಅಪರಾಧ ದಳ (ಇಓಡಬ್ಲ್ಯು)ವು ಎಫ್ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯವು ಪ್ರಕರಣದ ತನಿಖೆಯನ್ನು ಆರಂಭಿಸಿತ್ತು.
ನಿಯೊಮಾಕ್ಸ್ ಪ್ರಾಪರ್ಟಿಸ್ ಪ್ರೈ.ಲಿಮಿಟೆಡ್ ಹಾಗೂ ಅದರ ಸಮೂಹ ಸಂಸ್ಥೆಗಳ ವಿರುದ್ಧ ಹೂಡಿಕೆದಾರರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಶೇ.12-30ರಷ್ಟು ಬಡ್ಡಿದರದ ಭರವಸೆ ನೀಡಿ, ಈ ಸಂಸ್ಥೆಯು ನಿವೇಶನ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ರೂ.ಗಳನ್ನು ಠೇವಣಿಯಿರಿಸಿದ ಹೂಡಿಕೆದಾರರನ್ನು ವಂಚಿಸಿದೆಯೆಂದು ಜಾರಿ ನಿರ್ದೇಶನಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ತಮ್ಮ ಭರವಸೆಯನ್ನು ಈಡೇರಿಸಲು ಕಂಪೆನಿ ಹಾಗೂ ಅದರ ಪ್ರವರ್ತಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆಂದು ವರದಿ ಹೇಳಿದೆ.
ನಿಯೋಮಾಕ್ಸ್ ಸಮೂಹ ಕಂಪೆನಿಗಳು ಸಾರ್ವಜನಿಕರಿಂದ ನೂರಾರು ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು ಹಾಗೂ ಈ ನಿಧಿಗಳನ್ನು ತನ್ನ ಬೇನಾಮಿ ಕಂಪೆನಿಗಳು, ಉದ್ಯಮ ಸಮೂಹಗಳು ಹಾಗೂ ಇತರ ಕಂಪೆನಿಗಳಿಗೆ ವರ್ಗಾಯಿಸಿತ್ತು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ತನ್ನ ಅಕ್ರಮ ವ್ಯವಹಾರಗಳನ್ನು ಮುಚ್ಚಿಹಾಕಲು ಉದ್ಯಮ ಸಮೂಹವು ತನ್ನ ಲೆಕ್ಕಪತ್ರಗಳ ಪುಸ್ತಕಗಳನ್ನು ತಿರುಚಿತ್ತು ಹಾಗೂ ಅದನ್ನು ಉದ್ಯಮ ಸಮೂಹದ ಲೆಕ್ಕಪತ್ರ ಪರಿಶೋಧಕರು ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.