ಕೆನಡಾ ಮೂಲದ ಭೂಗತ ಪಾತಕಿ ಗೋಲ್ಡಿ ಬ್ರಾರ್ ಭಯೋತ್ಪಾದಕ : ಕೇಂದ್ರ ಸರಕಾರ ಘೋಷಣೆ
Photo: hindustantimes.com
ಹೊಸದಿಲ್ಲಿ: ಕೆನಡಾ ಮೂಲದ ಭೂಗತ ಪಾತಕಿ ಸತಿಂದರ್ಜಿತ್ ಸಿಂಗ್ ಆಲಿಯಾಸ್ ಗೋಲ್ಡಿ ಬ್ರಾರ್ ನನ್ನು ಕೇಂದ್ರ ಸರಕಾರ ಸೋಮವಾರ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ.
ಗೋಲ್ಡಿ ಬ್ರಾರ್ ( 29) ಸಿಧು ಮೂಸೆವಾಲ ಎಂದು ಜನಪ್ರಿಯರಾಗಿದ್ದ ಪಂಜಾಬಿ ಗಾಯಕ ಶುಭ್ದೀಪ್ ಸಿಂಗ್ ಸಿಧು ಹತ್ಯೆ ಪ್ರಕರಣ ಸೇರಿದಂತೆ ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
2022 ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಮೂಸೆವಾಲ ಅವರನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು. ಅಂದಿನಿಂದ ಗೋಲ್ಡಿ ಬ್ರಾರ್ ಪರಾರಿಯಾಗಿದ್ದ.
ಪಾಕಿಸ್ತಾನ ಮೂಲದ ಏಜೆನ್ಸಿಯಿಂದ ಬೆಂಬಲಿತ ಗೋಲ್ಡಿ ಬ್ರಾರ್ ಹಲವು ಹತ್ಯೆಗಳಲ್ಲಿ ಭಾಗಿಯಾಗಿದ್ದಾನೆ ಹಾಗೂ ಉಗ್ರವಾದವನ್ನು ಪ್ರತಿಪಾದಿಸುತ್ತಿದ್ದಾನೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಷ್ಟ್ರೀಯವಾದಿ ನಾಯಕರಿಗೆ ಬೆದರಿಕೆ ಕರೆ ಮಾಡಿದ, ಹಣದ ಬೇಡಿಕೆ ಇರಿಸಿದ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹತ್ಯೆ ಪ್ರತಿಪಾದಿಸಿ ಪೋಸ್ಟ್ ಮಾಡಿರುವುದರಲ್ಲಿ ಆತನ ಹೆಸರು ಕೇಳಿ ಬಂದಿತ್ತು ಎಂದು ಅದು ತಿಳಿಸಿದೆ.
ಗೋಲ್ಡಿ ಬ್ರಾರ್ ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾನೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ-1967ರ ನಾಲ್ಕನೇ ಪರಿಚ್ಛೇದದ ಅಡಿಯಲ್ಲಿ ಭಯೋತ್ಪಾದಕ ಎಂದು ಸೇರಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಮೇ ನಲ್ಲಿ ಕೆನಡಾ ಸರಕಾರ ಗೋಲ್ಡಿ ಬ್ರಾರ್ನನ್ನು ದೇಶಕ್ಕೆ ಬೇಕಾಗಿರುವ 25 ಕುಖ್ಯಾತ ಕ್ರಿಮಿನಲ್ ಗಳ ಪಟ್ಟಿಯಲ್ಲಿ ಹೆಸರಿಸಿತ್ತು.