ದಿಲ್ಲಿ ವಿಧಾನಸಭೆ ಚುನಾವಣೆ : 33.31% ಮತದಾನ ದಾಖಲು

Photo | hindustantimes.com
ಹೊಸದಿಲ್ಲಿ : 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ 33.31% ಮತದಾನವಾಗಿದೆ ಎಂದು ವರದಿಯಾಗಿದೆ.
ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, 13,766 ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ. ಆಡಳಿತರೂಢ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ದಿಲ್ಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ದಿಲ್ಲಿ ವಿಧಾನಸಭೆಗೆ 699 ಅಭ್ಯರ್ಥಿಗಳು ಕಣದಲ್ಲಿದ್ದು ಅವರ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗುತ್ತಿದೆ. ಮತದಾನದ ಹಿನ್ನೆಲೆ ದಿಲ್ಲಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 220 ಅರೆಮಿಲಿಟರಿ ಪಡೆ ತುಕಡಿಗಳನ್ನು ನಿಯೋಜಿಸಲಾಗಿದ್ದು, ಇದರ ಜತೆಗೆ 35,626 ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ಪಡೆಯ 19 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ತಮ್ಮ ಹಕ್ಕುಗಳನ್ನು ಚಲಾವಣೆ ಮಾಡಿದ್ದಾರೆ. ದಿಲ್ಲಿ ವಿಧಾನಸಭೆಗೆ 1.56 ಕೋಟಿ ನಾಗರಿಕರು ಮತ ಚಲಾಯಿಸಲಿದ್ದು, ಇದರಲ್ಲಿ 83.76 ಲಕ್ಷ ಪುರುಷರು, 72.36 ಲಕ್ಷ ಮಹಿಳೆಯರು ಮತ್ತು 1,267 ತೃತೀಯ ಲಿಂಗಿಗಳು ಸೇರಿದ್ದಾರೆ.