ಪ್ರವಾದಿ ಮುಹಮ್ಮದರ ಕುರಿತು ಅವಹೇಳನಕಾರಿ ಪೋಸ್ಟ್: ಎನ್ಐಟಿ ಶ್ರೀನಗರ ವಿದ್ಯಾರ್ಥಿಯ ವಿರುದ್ಧ ಪ್ರಕರಣ
Photo: PTI
ಶ್ರೀನಗರ,ನ: ಇನ್ಸ್ಟಾಗ್ರಾಮ್ ನಲ್ಲಿ ಪ್ರವಾದಿ ಮುಹಮ್ಮದ್ರ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಇಲ್ಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT)ಯ ವಿದ್ಯಾರ್ಥಿಯ ವಿರುದ್ಧ ಶ್ರೀನಗರ ಪೋಲಿಸರು ಬುಧವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಯ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಮಂಗಳವಾರ ಸಂಜೆ ಎನ್ಐಟಿಯಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಬುಧವಾರವೂ ಶ್ರೀನಗರದ ಕೆಲವು ಕಾಲೇಜುಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಆರೋಪಿ ವಿದ್ಯಾರ್ಥಿಯನ್ನು ಸಂಸ್ಥೆಯಿಂದ ಡಿಬಾರ್ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದಲ್ಲಿರುವ ಯಾರೋ ತನಗೆ ಕಳುಹಿಸಿದ್ದ ವೀಡಿಯೊವನ್ನು ವಿದ್ಯಾರ್ಥಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದ ಎಂದು ಎನ್ಐಟಿ ನಿರ್ದೇಶಕ ಅತಿಕುರ್ ರೆಹಮಾನ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿಯು ತಿಳಿಸಿದೆ.
‘ಪರಿಸ್ಥಿತಿಯನ್ನು ಶಾಂತಗೊಳಿಸಲಾಗಿದೆ ಮತ್ತು ಈ ವಿಷಯದಲ್ಲಿ ಕ್ರಮವನ್ನು ತೆಗೆದುಕೊಳ್ಳುವುದಾಗಿ ನಾವು ಭರವಸೆ ನೀಡಿದ್ದೇವೆ. ವಿಚಾರಣೆಯು ನಡೆಯುತ್ತಿದೆ ಮತ್ತು ಅದರ ಶಿಫಾರಸುಗಳನ್ನು ಪಾಲಿಸಲಾಗುವುದು ’ ಎಂದೂ ರೆಹಮಾನ್ ಹೇಳಿದ್ದಾರೆ.
ವದಂತಿಗಳನ್ನು ಹರಡದಂತೆ ಅಥವಾ ಸಮಾಜವಿರೋಧಿ ಶಕ್ತಿಗಳ ಸುಳ್ಳು ಪ್ರಚಾರಕ್ಕೆ ಬಲಿಯಾಗದಂತೆ ಶ್ರೀನಗರ ಪೋಲಿಸರು ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ. ಪ್ರಚೋದನಕಾರಿ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.