ಹಿಂದಿ ಭಾಷಿಕ ರಾಜ್ಯಗಳನ್ನು ʼಗೋಮೂತ್ರ ರಾಜ್ಯಗಳುʼ ಎಂದ ಡಿಎಂಕೆ ಸಂಸದ
ಡಿಎಂಕೆ ಸಂಸದ ಡಿ ಎನ್ ವಿ ಸೆಂಥಿಲ್ ಕುಮಾರ್ (Photo: ANI)
ಹೊಸದಿಲ್ಲಿ: ಹಿಂದಿ ಭಾಷಿಕರ ರಾಜ್ಯಗಳನ್ನು ʼಗೋಮೂತ್ರ ರಾಜ್ಯಗಳುʼ ಎಂದು ಹೇಳುವ ಮೂಲಕ ಡಿಎಂಕೆ ಸಂಸದ ಡಿ ಎನ್ ವಿ ಸೆಂಥಿಲ್ ಕುಮಾರ್ ವಿವಾದಕ್ಕೀಡಾಗಿದ್ದಾರೆ.
ಇಂದು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಕುರಿತ ಎರಡು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದರು. “ಬಿಜೆಪಿಯು ಹಿಂದಿ ಭಾಷಿಕ ರಾಜ್ಯಗಳಲ್ಲಿ, ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಹೇಳುವ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಶಕ್ತಿಯನ್ನಷ್ಟೇ ಹೊಂದಿದೆ ಎಂದು ಈ ದೇಶದ ಜನರು ಅರಿಯಬೇಕು,” ಎಂದು ಸೆಂಥಿಲ್ ಕುಮಾರ್ ಹೇಳಿದರು.
“ನಿಮಗೆ (ಬಿಜೆಪಿಗೆ) ದಕ್ಷಿಣ ಭಾರತಕ್ಕೆ ಬರಲಾಗದು. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಫಲಿತಾಂಶ ನೋಡಿ, ನಾವಲ್ಲಿ ಬಲಶಾಲಿಗಳಾಗಿದ್ದೇವೆ. ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗುವ ಆಯ್ಕೆಯಿದ್ದರೆ ಅಚ್ಚರಿ ಪಡಬೇಕಾಗಿಲ್ಲ, ಏಕೆಂದರೆ ಅವರು ಅಲ್ಲಿ ಪರೋಕ್ಷವಾಗಿ ಅಧಿಕಾರಕ್ಕೆ ಬರಬಹುದು. ದಕ್ಷಿಣದ ರಾಜ್ಯಗಳಲ್ಲಿ ಕಾಲಿಡುವ ಕನಸು ಕೂಡ ಅವರಿಗೆ ಕಾಣಲಾಗುವುದಿಲ್ಲ ಅದಕ್ಕೆ,” ಎಂದು ಹೇಳಿದರು.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಈ ಹೇಳಿಕೆ ಅಸಂವೇದಿತನದಿಂದ ಕೂಡಿದೆ ಎಂದರಲ್ಲದೆ ಪಕ್ಷದ ಹೇಳಿಕೆಯು ಚೆನ್ನೈನಂತೆಯೇ ಮುಳುಗುತ್ತಿದೆ ಹಾಗೂ ಡಿಎಂಕೆಯ ಅಹಂಕಾರವೇ ಅದರ ಅದಃಪತನಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
“ನಮ್ಮ ಉತ್ತರ ಭಾರತೀಯ ಸ್ನೇಹಿತರನ್ನು ಪಾನಿ ಪುರಿ ಮಾರಾಟಗಾರರು, ಶೌಚಾಲಯ ನಿರ್ಮಾಣಕಾರರು ಇತ್ಯಾದಿ ಎಂದ ಬಳಿಕ, ಇಂಡಿ ಅಲಾಯನ್ಸ್ ಡಿಎಂಕೆ ಸಂಸದ ಗೋಮೂತ್ರ ವ್ಯಂಗ್ಯವಾಡುತ್ತಿದ್ದಾರೆ,” ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.