ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ಕಠಿಣ ಕ್ರಮದ ಹೊರತಾಗಿಯೂ ಕಳ್ಳಮಾರ್ಗದ ಬಳಕೆ ನಿಂತಿಲ್ಲ: ವರದಿ

PC | PTI
ಹೊಸದಿಲ್ಲಿ: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರಕಾರವು ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಟ್ರಂಪ್ ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳಲ್ಲಿ ಅವರವರ ದೇಶಕ್ಕೆ ಮರಳಿ ಕಳುಹಿಸುತ್ತಿದ್ದು,200ಕ್ಕೂ ಅಧಿಕ ಭಾರತೀಯರನ್ನು ಹೊತ್ತ ವಿಮಾನವೊಂದು ಮಂಗಳವಾರ ಅಮೃತಸರಕ್ಕೆ ಆಗಮಿಸಿದೆ.
ಟ್ರಂಪ್ ಕ್ರಮದ ಹೊರತಾಗಿಯೂ ಅಮೆರಿಕದಲ್ಲಿ ಪುನರ್ವಸತಿಯನ್ನು ಕಂಡುಕೊಳ್ಳುವ ಉತ್ಸಾಹ ಶ್ರೀಮಂತ ದೇಶವಾಗಿರುವ ಅದು ತಮಗೆ ಸ್ವದೇಶದಲ್ಲಿ ಸಾಧಿಸಲು ಸಾಧ್ಯವಾಗದ ಸಮೃದ್ಧಿಯನ್ನು ಒದಗಿಸುತ್ತದೆ ಎಂದು ನಂಬಿರುವ ಭಾರತೀಯರ ನಿರ್ದಿಷ್ಟ ವರ್ಗವೊಂದರಲ್ಲಿ ಕಡಿಮೆಯಾಗಿಲ್ಲ.
ಪಂಜಾಬ್ ಮತ್ತು ಹರ್ಯಾಣದಲ್ಲಿ ಹೇಗಾದರೂ ಮಾಡಿ ಅಮೆರಿಕ ಸೇರಬೇಕು ಎಂದು ಕಾತರಿಸಿರುವ ಯುವಜನರು ಈಗಲೂ ಭಾರೀಸಂಖ್ಯೆಯಲ್ಲಿ ಟ್ರಾವೆಲ್ ಏಜೆನ್ಸಿಗಳಿಗೆ ಎಡತಾಕುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಶಾರುಖ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ‘ಡಂಕಿ’ ಮೂಲಕ ಜನರಿಗೆ ಪರಿಚಯವಾಗಿರುವ ‘ಡಂಕಿ ರೂಟ್’ ಎಂದೇ ಕರೆಯಲಾಗುವ ಕಳ್ಳ ಮಾರ್ಗವು ಹೆಚ್ಚುತ್ತಿರುವ ಅಪಾಯಗಳ ಹೊರತಾಗಿಯೂ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗಲು ಹಿಂಜರಿಯದ ಆಕಾಂಕ್ಷಿಗಳಲ್ಲಿ ಇನ್ನೂ ಜನಪ್ರಿಯವಾಗಿದೆ.
‘ಡಂಕಿ ರೂಟ್’ ಜನರನ್ನು ಆಫ್ರಿಕನ್ ಮತ್ತು ದಕ್ಷಿಣ ಅಮೆರಿಕ ದೇಶಗಳ ಮೂಲಕ ಮೆಕ್ಸಿಕೊವನ್ನು ತಲುಪಿಸುತ್ತದೆ ಮತ್ತು ನಂತರ ಅವರನ್ನು ಅಮೆರಿಕದ ಗಡಿಯೊಳಗೆ ನುಸುಳಿಸಲಾಗುತ್ತದೆ.
ಅನಧಿಕೃತ ಮಾರ್ಗಗಳ ಮೂಲಕವೂ ಅಮೆರಿಕದ ವೀಸಾಗಳಿಗೆ ಬೇಡಿಕೆ ಎಂದಿನಂತೆ ಹೆಚ್ಚುತ್ತಲೇ ಇದೆ. ಉತ್ತಮ ಅವಕಾಶಗಳ ಭರವಸೆ ಮತ್ತು ಅಮೆರಿಕ ಕನಸಿನಿಂದಾಗಿ ಪಂಜಾಬ್ ಮತ್ತು ಹರ್ಯಾಣಗಳ ಹಲವಾರು ಯುವಜನರು ಅಪಾಯವನ್ನು ಎದುರು ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಜಲಂಧರ ಮೂಲದ ಟ್ರಾವೆಲ್ ಏಜೆಂಟ್ವೋರ್ವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಬಹಾಮಾಸ್ ಮೂಲಕ ತೆರಳುವುದು ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಇನ್ನೊಂದು ಮಾರ್ಗವಾಗಿದೆ. ದಿಲ್ಲಿಯಿಂದ ಬಹಾಮಾಸ್ ತಲುಪಲು 27 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹಲವಾರ ಕಡೆಗಳಲ್ಲಿ ಕಾಯಬೇಕಾಗುತ್ತದೆ. ಬಳಿಕ ಅಲ್ಲಿಂದ ಅಮೆರಿಕಕ್ಕೆ ಮಿಯಾಮಿ ಮೂಲಕ ಮತ್ತು ಪೋರ್ಟ್ ಆಫ್ ಹ್ಯೂಸ್ಟನ್ ಮೂಲಕ; ಹೀಗೆ ಎರಡು ಸಮುದ್ರ ಮಾರ್ಗಗಳಿವೆ. ಪೋರ್ಟ್ ಆಫ್ ಹ್ಯೂಸ್ಟನ್ ಮೂಲಕ ಹತ್ತಿರದ ಮಾರ್ಗವಾಗಿದ್ದರೂ ಇಲ್ಲಿ ಅಪಾಯಗಳೂ ದೊಡ್ಡದಾಗಿಯೇ ಇವೆ. ಇಲ್ಲಿ ವಲಸಿಗರನ್ನು ಅಮೆರಿಕದ ತೀರಕ್ಕೆ ಕಳ್ಳಸಾಗಣೆ ಮಾಡಲು ಸಣ್ಣ ಮತ್ತು ಕಿಕ್ಕಿರಿದ ದೋಣಿಗಳಲ್ಲಿ ಕುರಿಗಳನ್ನು ತುಂಬಿದಂತೆ ತುಂಬಲಾಗುತ್ತದೆ. ಈ ಪ್ರಯಾಣದ ವೇಳೆ ಹಲವರು ಸಮುದ್ರದಲ್ಲಿ ಮುಳುಗಿ ಸಾಯುತ್ತಾರೆ ಎಂದು ಏಜೆಂಟ್ವೋರ್ವರು ತಿಳಿಸಿದರು.
ಕಳೆದ ಐದಾರು ವರ್ಷಗಳಿಂದ ಕೆನಡಾ ಗಡಿಯ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಹೊಸ ಪ್ರವೃತ್ತಿ ಆರಂಭಗೊಂಡಿದೆ. ಅಮೆರಿಕದ ಕನಸು ಕಾಣುತ್ತಿರುವವರು ಸಾಮಾನ್ಯವಾಗಿ ವಿಸಿಟಿಂಗ್ ಅಥವಾ ವಿದ್ಯಾರ್ಥಿ ವೀಸಾಗಳಲ್ಲಿ ಕೆನಡಾವನ್ನು ತಲುಪುತ್ತಾರೆ. ನಂತರ ಅಮೆರಿಕದೊಳಗೆ ನುಸುಳುತ್ತಾರೆ ಮತ್ತು ಅಲ್ಲಿ ಆಶ್ರಯ ಕೋರಿ ಅರ್ಜಿಗಳನ್ನು ಸಲ್ಲಿಸುತ್ತಾರೆ.
ಯುಎಸ್ ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ ಪ್ರಕಾರ ಅಕ್ಟೊಬರ್ 2020 ಮತ್ತು ಆಗಸ್ಟ್ 2024ರ ನಡುವೆ ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಸುಮಾರು 84,600 ಭಾರತೀಯರನ್ನು ಪತ್ತೆ ಹಚ್ಚಲಾಗಿದ್ದರೆ, ಕೆನಡಾದೊಂದಿಗಿನ ಉತ್ತರ ಗಡಿಯಲ್ಲಿ 88,400 ಭಾರತೀಯರನ್ನು ತಡೆಯಲಾಗಿತ್ತು.