ಜಲಾಂತರ್ಗಾಮಿ ಯೋಜನೆ ಗುಜರಾತಿಗೆ ವರ್ಗಾವಣೆ: ಮಹಾರಾಷ್ಟ್ರದ ಶಿಂದೆ ಸರಕಾರದ ವಿರುದ್ಧ ವಿಪಕ್ಷಗಳ ದಾಳಿ
Photo : PTI
ಮುಂಬೈ: ರಾಜ್ಯದಿಂದ ಇನ್ನೊಂದು ಯೋಜನೆಯು ಗುಜರಾತಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿಯ ವಿಪಕ್ಷಗಳು ಸರಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿವೆ. ಮಾಧ್ಯಮ ವರದಿಯಂತೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ನಿವತಿ ರಾಕ್ನಲ್ಲಿ ಸ್ಥಾಪಿಸಲು ಯೋಜಿಸಲಾಗಿದ್ದ ಭಾರತದ ಮೊದಲ ಜಲಾಂತರ್ಗಾಮಿ ಯೋಜನೆಯು ಈಗ ಗುಜರಾತಿನಲ್ಲಿ ತಲೆಯೆತ್ತುವ ಸಾಧ್ಯತೆಯಿದೆ.
ಮಹಾರಾಷ್ಟ್ರ ಸರಕಾರವು 2018ರಲ್ಲಿ ಈ ಯೋಜನೆಯನ್ನು ಪ್ರಕಟಿಸಿದ್ದು, ಅದಕ್ಕಾಗಿ 56 ಕೋ.ರೂ.ಗಳನ್ನೂ ತೆಗೆದಿರಿಸಿತ್ತು. ಆದರೆ ಯೋಜನೆಯು ಕಾರ್ಯಾರಂಭಗೊಳ್ಳಲಿಲ್ಲ. ಈ ಯೋಜನೆಯು ಈಗ ದ್ವಾರಕಾದಲ್ಲಿ ಆರಂಭಗೊಳ್ಳಲಿದೆ ಮತ್ತು ಇದಕ್ಕಾಗಿ ಮಜಗಾಂವ್ ಡಾಕ್ ಲಿ. ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಗುಜರಾತ್ ಸರಕಾರವು ತಿಳಿಸಿದೆ ಎಂದೂ ವರದಿಯು ತಿಳಿಸಿದೆ.
ರವಿವಾರ ಈ ಕುರಿತು ಶಿಂದೆ ಸರಕಾರವನ್ನು ತರಾಟೆಗೆತ್ತಿಕೊಂಡ ಶಿವಸೇನೆ (ಠಾಕ್ರೆ ಬಣ) ಶಾಸಕ ವೈಭವ ನಾಯ್ಕ್ ಅವರು, ಕೆಲವು ವರ್ಷಗಳ ಹಿಂದೆ ಈ ಯೋಜನೆಯನ್ನು ಘೋಷಿಸಲಾಗಿತ್ತು. ಎಂವಿಎ ಸರಕಾರದ ಅವಧಿಯಲ್ಲಿ ಇದಕ್ಕಾಗಿ ಬಜೆಟ್ನಲ್ಲಿ ಹಂಚಿಕೆಯನ್ನು ಮಾಡಲಾಗಿತ್ತು. ಸಾಗರ ತಜ್ಞ ಸಾರಂಗ ಕುಲಕರ್ಣಿ ಅವರನ್ನು ಸಲಹೆಗಾರರನ್ನಾಗಿ ನೇಮಕಗೊಳಿಸಲಾಗಿತ್ತು. ಸುಮಾರು 200 ಕೋ.ರೂ.ಗಳಿಗೆ ಜಲಾಂತರ್ಗಾಮಿಯ ಖರೀದಿ ಬಗ್ಗೆ ಪ್ರಾಥಮಿಕ ಚರ್ಚೆಗಳೂ ನಡೆದಿದ್ದವು. ಶಿಂದೆ-ಫಡ್ನವೀಸ್ ಸರಕಾರವು ಅಧಿಕಾರಕ್ಕೆ ಬಂದ ನಂತರ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಲಿಲ್ಲ. ಈಗ ಈ ಯೋಜನೆಯು ಗುಜರಾತಿನ ದ್ವಾರಕಾಕ್ಕೆ ಸ್ಥಳಾಂತರಗೊಳ್ಳುತ್ತಿದೆ ಎಂದು ನಮಗೆ ತಿಳಿದುಬಂದಿದೆ ೞ ಎಂದು ಹೇಳಿದರು.
ಈ ಸ್ಥಳಾಂತರವನ್ನು ಶಿವಸೇನೆ (ಠಾಕ್ರೆ ಬಣ)ದ ನಾಯಕ ಸಂಜಯ ರಾವುತ್ ಅವರೂ ಟೀಕಿಸಿದ್ದಾರೆ. ಶಿಂದೆ-ಫಡ್ನವೀಸ್ ಸರಕಾರವು ಹೆಚ್ಚಿನ ಯೋಜನೆಗಳನ್ನು ಗುಜರಾತಿಗೆ ಸ್ಥಳಾಂತರಿಸುತ್ತಿರುವಂತೆ ಕಾಣುತ್ತಿದೆ. ಗುಜರಾತ್ ಮಹಾರಾಷ್ಟ್ರದಿಂದ 17 ಯೋಜನೆಗಳನ್ನು ಕಿತ್ತುಕೊಂಡಿದೆ,ಆದರೆ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದರ ವಿರುದ್ಧ ತುಟಿಪಿಟಕ್ಕೆಂದಿಲ್ಲ. ಗುಜರಾತ್ ಯುವಜನರಿಗೆ ಉದ್ಯೋಗಗಳನ್ನು ನೀಡುವ ಯೋಜನೆಗಳನ್ನು ಕಿತ್ತುಕೊಳ್ಳುತ್ತಿದೆ ಮತ್ತು ಅದಕ್ಕೆ ಬದಲಾಗಿ ಯುವಜನರನ್ನು ಹಾಳು ಮಾಡಲು ಮಾದಕ ದ್ರವ್ಯಗಳನ್ನು ಪೂರೈಸುತ್ತಿದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರಕಾರವು ಇನ್ನೂ ಎಷ್ಟು ಯೋಜನೆಗಳನ್ನು ಗುಜರಾತಿಗೆ ಉಡುಗೊರೆಯಾಗಿ ನೀಡಲಿದೆ ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ವಿಜಯ ವಡೆತ್ತಿವಾರ್,ಒಂದರ ಹಿಂದೊಂದರಂತೆ ಯೋಜನೆಗಳನ್ನು ಗುಜರಾತಿಗೆ ಸಾಗಿಸಲಾಗುತ್ತಿದೆ,ಆದರೆ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ತಮ್ಮ ರಾಜಕೀಯ ಯಜಮಾನರಿಗೆ ಸೆಲ್ಯೂಟ್ ಹೊಡೆಯಲಷ್ಟೇ ದಿಲ್ಲಿಗೆ ಹೋಗುತ್ತಾರೆ ಎಂದು ಟೀಕಿಸಿದರು.
ಈನಡುವೆ ಗುಜರಾತಿಗೆ ಯೋಜನೆ ಸ್ಥಳಾಂತರಗೊಳ್ಳುತ್ತಿದೆ ಎಂಬ ಆರೋಪಗಳು ಸುಳ್ಳು ಎಂದು ಶಿಂದೆ ಪ್ರತಿಪಾದಿಸಿದ್ದಾರೆ.