ಸೂರ್ಯ ಸಪ್ತಮಿಯಂದು ಶಾಲೆಗಳಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ಆದೇಶಿಸಿದ ರಾಜಸ್ಥಾನದ ಶಿಕ್ಷಣ ಸಚಿವ
![ಸೂರ್ಯ ಸಪ್ತಮಿಯಂದು ಶಾಲೆಗಳಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ಆದೇಶಿಸಿದ ರಾಜಸ್ಥಾನದ ಶಿಕ್ಷಣ ಸಚಿವ ಸೂರ್ಯ ಸಪ್ತಮಿಯಂದು ಶಾಲೆಗಳಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ಆದೇಶಿಸಿದ ರಾಜಸ್ಥಾನದ ಶಿಕ್ಷಣ ಸಚಿವ](https://www.varthabharati.in/h-upload/2024/01/24/1236504-01.avif)
ಸಾಂದರ್ಭಿಕ ಚಿತ್ರ
ಜೈಪುರ: ಸೂರ್ಯ ಸಪ್ತಮಿಯ ಸಂದರ್ಭದಲ್ಲಿ ಫೆ.15ರಂದು ವಿದ್ಯಾರ್ಥಿಗಳು, ಶಿಕ್ಷಕರು/ಸಿಬ್ಬಂದಿಗಳು, ಪೋಷಕರು ಮತ್ತು ಸ್ಥಳೀಯರ ಪಾಲ್ಗೊಳ್ಳುವಿಕೆಯೊಂದಿಗೆ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಆಯೋಜಿಸುವಂತೆ ರಾಜಸ್ಥಾನದ ಬಿಜೆಪಿ ಸರಕಾರವು ರಾಜ್ಯದಲ್ಲಿಯ ಎಲ್ಲ ಸರಕಾರಿ ಶಾಲೆಗಳಿಗೆ ನಿರ್ದೇಶ ನೀಡಿದೆ.
ಫೆ.15ರ ಕಾರ್ಯಕ್ರಮಕ್ಕೆ ಸಿದ್ಧವಾಗಲು ಪ್ರತಿ ದಿನ ಶಾಲಾ ಪ್ರಾರ್ಥನೆಗಳ ಸಂದರ್ಭದಲ್ಲಿ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಿಸುವಂತೆ ರಾಜಸ್ಥಾನ ಪ್ರೌಢ ಶಿಕ್ಷಣ ಇಲಾಖೆಯು ಎಲ್ಲ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿದೆ. ‘ವಿಶ್ವ ದಾಖಲೆ ’ಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
‘ವಿದ್ಯಾರ್ಥಿಗಳು ಈಗ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಲಿದ್ದಾರೆ. ಸೂರ್ಯನ ಬಿಸಿಲು ಬಹಳ ಮುಖ್ಯವಾಗಿದ್ದು, ವಿಟಮಿನ್ ಡಿ ಮೂಲವಾಗಿರುವ ಅದು ಶರೀರದ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಫೆ.15ರವರೆಗೆ ಮುಂದುವರಿಯಲಿದ್ದು,ಬಳಿಕ ನಾವು ಈ ಬಗ್ಗೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ’ ಎಂದು ಇಲಾಖೆಯ ನಿರ್ದೇಶಕ ಆಶಿಷ್ ಮೋದಿ ಅವರು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಎಲ್ಲ ಸರಕಾರಿ ಶಾಲೆಗಳು ಸೂರ್ಯ ಸಪ್ತಮಿಯನ್ನು ಬೃಹತ್ ಪ್ರಮಾಣದಲ್ಲಿ ಆಚರಿಸಲಿವೆ. ಇದನ್ನು ದೇಶದಲ್ಲಿ ಇಂತಹ ಅತ್ಯಂತ ದೊಡ್ಡ ಕಾರ್ಯಕ್ರಮವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಇತ್ತೀಚಿಗೆ ಸುದ್ದಿಗಾರರಿಗೆ ತಿಳಿಸಿದ್ದ ರಾಜ್ಯದ ಶಿಕ್ಷಣ ಸಚಿವ ಮದನ ದಿಲಾವರ್ ಅವರು, ಫೆ.15 ಮತ್ತು 16 ಈ ಎರಡೂ ದಿನ ಸೂರ್ಯ ಸಪ್ತಮಿಯಿದ್ದು, ಫೆ.15ರಂದು ಸೂರ್ಯ ನಮಸ್ಕಾರದೊಂದಿಗೆ ಸೂರ್ಯ ದೇವರನ್ನು ಆರಾಧಿಸಲು ನಾವು ಯೋಜಿಸಿದ್ದೇವೆ. ಇದು ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯೊಂದಿಗೆ ದೇಶದಲ್ಲಿ ಇಂತಹ ಅತ್ಯಂತ ದೊಡ್ಡ ಕಾರ್ಯಕ್ರಮವಾಗಲಿದೆ ಎಂದು ಹೇಳಿದ್ದರು.
ಭಜನಲಾಲ ಶರ್ಮಾ ನೇತೃತ್ವದ ರಾಜಸ್ಥಾನ ಸರಕಾರದಲ್ಲಿ ಶಾಲಾ ಶಿಕ್ಷಣದಂತಹ ಮಹತ್ವದ ಖಾತೆಯನ್ನು ಹೊಂದಿರುವ ದಿಲಾವರ್ ರಾಜ್ಯದಲ್ಲಿ ಕೇಸರಿ ಪಕ್ಷದ ಫೈರ್ ಬ್ರ್ಯಾಂಡ್ ಹಿಂದುತ್ವ ಮುಖಗಳಲ್ಲೊಂದಾಗಿದ್ದಾರೆ. ಅವರು ಆಗಾಗ್ಗೆ ತನ್ನ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾರೆ.
ಸೋಮವಾರ ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನಡೆದ ಬಳಿಕ ದಿಲಾವರ್ ಸಂತೋಷದಿಂದ ನರ್ತಿಸುತ್ತಿದ್ದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.
1990ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೂ ಹಾರವನ್ನು ಧರಿಸುವುದಿಲ್ಲ ಎಂದು ತಾನು ಪ್ರತಿಜ್ಞೆ ಮಾಡಿದ್ದೆ ಮತ್ತು ಅದೀಗ ಪೂರ್ಣಗೊಂಡಿದೆ ಎಂದು ಹೇಳಿದ್ದ ದಿಲಾವರ್ (64), ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಕೃಷ್ಣ ಮಂದಿರ ನಿರ್ಮಾಣವಾಗುವವರೆಗೂ ದಿನಕ್ಕೆ ಒಂದೇ ಬಾರಿ ಊಟವನ್ನು ಸೇವಿಸುವುದಾಗಿ ಹೊಸ ಪ್ರತಿಜ್ಞೆಯನ್ನು ಮಾಡಿದ್ದಾರೆ. ಮಥುರಾದಲ್ಲಿ ಶಾಹಿ ಈದಗಾ ಮಸೀದಿಯಿರುವ ಸ್ಥಳವು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ ಎಂದು ಸಂಘ ಪರಿವಾರವು ಪ್ರತಿಪಾದಿಸುತ್ತಿದೆ.