ಗುಜರಾತ್ | 42 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಕೆಡವಲು ಬೇಕು 52 ಕೋಟಿ ರೂ.!
ನಿರ್ಮಾಣವಾದ 5 ವರ್ಷಕ್ಕೆ ಅಸುರಕ್ಷಿತವಾದ ಅಹಮದಾಬಾದ್ ನ ಹಾತ್ಕೇಶ್ವರ್ ಸೇತುವೆ!
PC : thevocalnews.com
ಅಹಮದಾಬಾದ್ : ನಗರದ ಹಾತ್ಕೇಶ್ವರ್ ಸೇತುವೆ ಮಾರ್ಗವನ್ನು 2017ರಲ್ಲಿ 42 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಈಗ, ಅದರ ನೆಲಸಮಕ್ಕೆ ಬರೋಬ್ಬರಿ 52 ಕೋಟಿ ರೂ. ವೆಚ್ಚವಾಗುತ್ತಿದೆ. ಇದು ನಂಬಲಸಾಧ್ಯವಾದರೂ ಸತ್ಯ!
2017ರಲ್ಲಿ ನಿರ್ಮಾಣವಾಗಿದ್ದ ಹಾತ್ಕೇಶ್ವರ್ ಸೇತುವೆ ಮಾರ್ಗವನ್ನು ಅದರ ಶಿಥಿಲ ಪರಿಸ್ಥಿತಿಯ ಕಾರಣಕ್ಕೆ 2022ರಲ್ಲಿ ಮುಚ್ಚಲಾಗಿತ್ತು. ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಕೇವಲ ಐದೇ ವರ್ಷಗಳಲ್ಲಿ ಈ ಸೇತುವೆಯು ಅಸುರಕ್ಷಿತವಾಗಿ ಪರಿಣಮಿಸಿತ್ತು. ಹೀಗಾಗಿ ಅಹಮದಾಬಾದ್ ಮಹಾನಗರ ಪಾಲಿಕೆಯು ಈ ಸೇತುವೆಯನ್ನು ಕೆಡವಲು ಮುಂದಾಗಿದೆ.
2017ರಲ್ಲಿ ನಿರ್ಮಾಣವಾದ ಈ ಸೇತುವೆಯ ಜೀವಿತಾವಧಿ 100 ವರ್ಷ ಎಂದು ಹೇಳಲಾಗಿತ್ತು. ಆದರೆ, ಕೇವಲ ಐದು ವರ್ಷಗಳ ನಂತರ ಈ ಸೇತುವೆಯಲ್ಲಿ ಬಿರುಕುಗಳು ಕಾಣಿಸಿಕೊಂಡವು. ಹೀಗಾಗಿ, 2022ರಲ್ಲಿ ಈ ಸೇತುವೆ ಮಾರ್ಗವನ್ನು ಮುಚ್ಚಿದ್ದ ಅಹಮದಾಬಾದ್ ಮಹಾನಗರ ಪಾಲಿಕೆಯು, ಸೇತುವೆಯ ಸ್ಥಿರತೆ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಸೇತುವೆಯು ಇನ್ನು ಸುರಕ್ಷಿತವಲ್ಲ ಎಂಬ ಸಂಗತಿ ಬಯಲಾಗಿತ್ತು.
2022ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಈ ಸೇತುವೆಯನ್ನು ಕೆಡವಲು ಟೆಂಡರ್ ಕರೆದರೂ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಮೊದಲೆರಡು ಟೆಂಡರ್ ಗಳಿಗೆ ಯಾವುದೇ ಗುತ್ತಿಗೆದಾರರೂ ಬಿಡ್ ಸಲ್ಲಿಸಿರಲಿಲ್ಲ. ಮೂರನೆಯ ಟೆಂಡರ್ ನಲ್ಲಿ ಮಹಾರಾಷ್ಟ್ರ ಮೂಲದ ಗುತ್ತಿಗೆದಾರರೊಬ್ಬರು ಆರಂಭದಲ್ಲಿ ಆಸಕ್ತಿ ತೋರಿದರಾದರೂ, ನಂತರ ಹಿಂಜರಿದಿದ್ದರು. ಕೊನೆಯದಾಗಿ, ನಾಲ್ಕನೆಯ ಪ್ರಯತ್ನದಲ್ಲಿ ರಾಜಸ್ಥಾನದ ವಿಷ್ಣುಪ್ರಸಾದ್ ಪುಂಗ್ಲಿಯ ಎಂಬ ಗುತ್ತಿಗೆದಾರರು ಈ ಸೇತುವೆಯನ್ನು ಕೆಡವಲು 52 ಕೋಟಿ ರೂ. ಮೊತ್ತದ ಗುತ್ತಿಗೆ ಪಡೆದುಕೊಂಡಿದ್ದಾರೆ. ಈಗಾಗಲೇ ಕಾರ್ಯಾದೇಶವನ್ನೂ ನೀಡಲಾಗಿದ್ದು, ನೆಲಸಮ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಹಾತ್ಕೇಶ್ವರ್ ಸೇತುವೆಯನ್ನು ಕೆಡವಲು ಅದರ ನಿರ್ಮಾಣ ವೆಚ್ಚಕ್ಕಿಂತ 10 ಕೋಟಿ ರೂ. ಹೆಚ್ಚು ವೆಚ್ಚವಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸಾರ್ವಜನಿಕ ಮೂಲಭೂತ ಸೌಕರ್ಯ ನಿರ್ಮಾಣದ ವೈಫಲ್ಯವನ್ನು ಸೂಚಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೇತುವೆಯ ನೆಲಸಮ ಕಾರ್ಯಾಚರಣೆ ಪ್ರಗತಿಯಲ್ಲಿರುವುದರಿಂದ ನಗರದ ಜನರು ಆರ್ಥಿಕ ಮತ್ತು ಸರಕು ಸಾಗಣೆಯನ್ನು ಸುಗಮವಾಗಿ ಮಾಡಲಾಗದ ಸವಾಲಿಗೆ ತುತ್ತಾಗಿದ್ದಾರೆ.