ಇಸ್ರೇಲ್ ಪ್ರವೇಶಕ್ಕೆ ಗುಟೆರಸ್ಗೆ ನಿಷೇಧ |ಇರಾನ್ ಕ್ಷಿಪಣಿ ದಾಳಿ ಖಂಡಿಸದ್ದಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಆಕ್ರೋಶ
ಆ್ಯಂಟೊನಿಯ್ ಗುಟೆರಸ್ | PTI
ಹೊಸದಿಲ್ಲಿ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯ್ ಗುಟೆರಸ್ ಅವರಿಗೆ ಇಸ್ರೇಲ್ ಸರಕಾರ ನಿಷೇಧವನ್ನು ವಿಧಿಸಿದೆ. ಗುಟೆರಸ್ ಅವರು ಇಸ್ರೇಲ್ ವಿರುದ್ಧ ಪಕ್ಷಪಾತ ಮಾಡುತ್ತಿದ್ದಾರೆಂದು ಅದು ಆಪಾದಿಸಿದೆ. ‘‘ಗುಟೆರಸ್ ಸ್ವಾಗತಾರ್ಹ ವ್ಯಕ್ತಿಯಲ್ಲ . ಅವರು ಇಸ್ರೇಲ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’’ ಎಂದು ಹೇಳಿದೆ.
ಇಸ್ರೇಲ್ ಮೇಲೆ ಇರಾನ್ನ ಕ್ಷಿಪಣಿ ದಾಳಿಯನ್ನು ಸ್ಪಷ್ಟವಾಗಿ ಖಂಡಿಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ವಿಫಲರಾಗಿದ್ದಾರೆ ಎಂದು ಇಸ್ರೇಲಿ ವಿದೇಶಾಂಗ ಸಚಿವ ಇಸ್ರಾಯೇಲ್ ಕಾಟ್ಝ್ ಆಪಾದಿಸಿದ್ದಾರೆ. ಇಸ್ರೇಲ್ ಮೇಲೆ ಇರಾನ್ನ ಹೇಯ ದಾಳಿಯನ್ನು ಸ್ಪಷ್ಟವಾಗಿ ಖಂಡಿಸದವರು ಇಸ್ರೇಲ್ನ ನೆಲದ ಮೇಲೆ ಕಾಲಿಡಲು ಅರ್ಹರಲ್ಲವೆಂದು ಅವರು ಹೇಳಿದ್ದಾರೆ.
ಇಸ್ರೇಲ್ ರಾಜಧಾನಿ ಟೆಲ್ಅವೀವ್ ಮೇಲೆ ಇರಾನ್, ನೂರಕ್ಕೂ ಅಧಿಕ ಕ್ಷಿಪಣಿಗಳನ್ನು ಉಡಾಯಿಸಿದ ಬಳಿಕ ಗುಟೆರಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ‘‘ ಮಧ್ಯಪಾಚ್ಯ ಸಂಘರ್ಷವು ಉಲ್ಬಣಗೊಂಡು ವಿಸ್ತಾರಗೊಳ್ಳುವುದನ್ನು ನಾನು ಖಂಡಿಸುತ್ತೇನೆ. ಇದು ನಿಲ್ಲಬೇಕಾಗಿದೆ. ನಮಗೆ ಸಂಪೂರ್ಣ ಕದನವಿರಾಮದ ಅಗತ್ಯವಿದೆ’’ ಎಂದು ಬರೆದಿದ್ದರು.
ಎರಡು ದಿನಗಳ ಹಿಂದೆ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ ಭೂಕಾರ್ಯಾಚರಣೆಯನ್ನು ಆರಂಭಿಸಿದಾಗ, ಅದನ್ನು ಗುಟೆರಸ್ ಬಲವಾಗಿ ಖಂಡಿಸಿದ್ದರು. ಲೆಬನಾನ್ನ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕಾಗಿದೆ’’ ಎಂದವರು ಹೇಳಿಕೆ ನೀಡಿದ್ದರು.
‘‘ ಲೆಬನಾನ್ನಲ್ಲಿ ಸಂಘರ್ಷವು ಉಲ್ಬಣಿಸುತ್ತಿರುವುದರ ಬಗ್ಗೆ ನನಗೆ ತೀವ್ರ ಕಳವಳವಾಗಿದೆ ಹಾಗೂ ತಕ್ಷಣವೇ ಕದನವಿರಾಮವನ್ನು ಏರ್ಪಡಿಸಿಬೇಕೆಂದು ನಾನು ಮನವಿ ಮಾಡುತ್ತೇನೆ. ಎಷ್ಟು ಬೆಲೆ ತೆತ್ತಾದರೂ ಲೆಬನಾನ್ನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆಯುವುದನ್ನು ತಪ್ಪಿಸಬೇಕಾಗಿದೆ’’ ಎಂದು ಗುಟೆರಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕರೆ ನೀಡಿದ್ದರು.
‘‘ ಆಕ್ಟೋಬರ್ 7ರಂದು ಹಮಾಸ್ನ ಹಂತಕರು ಎಸಗಿದ ನರಮೇಧ ಹಾಗೂ ಲೈಂಗಿಕ ದೌರ್ಜನ್ಯಗಳನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈವರೆಗೆ ಖಂಡಿಸಿಲ್ಲ. ಅಲ್ಲದೆ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವ ನಿಟ್ಟಿನಲ್ಲಿ ಅವರು ಯಾವುದೇ ಪ್ರಯತ್ನಗಳನ್ನು ಅದು ನಡೆಸಿಲ್ಲ ಎಂದು ಕಾಟ್ಝ್ ಹೇಳಿದ್ದಾರೆ.