ಅಪಘಾತ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸಾ ಯೋಜನೆಯನ್ನು ನಿಜವಾದ ಅರ್ಥದಲ್ಲಿ ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

ಸಾಂದರ್ಭಿಕ ಚಿತ್ರ (credit: Grok)
ಹೊಸದಿಲ್ಲಿ: ರಸ್ತೆ ಅಪಘಾತಗಳ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸಾ ಯೋಜನೆಯು ನಿಜವಾದ ಅರ್ಥದಲ್ಲಿ ಜಾರಿಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಇತ್ತೀಚಿಗೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. 2025,ಮೇ 5ರಂದು ಈ ಯೋಜನೆಯನ್ನು ಅಧಿಸೂಚಿಸಲಾಗಿತ್ತು.
1988ರ ಮೋಟರ್ ವಾಹನಗಳ ಕಾಯ್ದೆಯ ಕಲಂ 162ರಡಿ ರೂಪಿಸಲಾಗಿರುವ ಈ ಯೋಜನೆಯು ಸರಕಾರವು ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯ ‘ಗೋಲ್ಡನ್ ಅವರ್’ಅವಧಿಯಲ್ಲಿ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸೆಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ.
ಯೋಜನೆಯ ಅನುಷ್ಠಾನದ ವಿವರಗಳೊಂದಿಗೆ ಅಫಿಡವಿಟ್ನ್ನು ಆಗಸ್ಟ್ 2025ರೊಳಗೆ ಸಲ್ಲಿಸುವಂತೆ ಮತ್ತು ಯೋಜನೆಗೆ ವ್ಯಾಪಕ ಪ್ರಚಾರ ನೀಡುವಂತೆಯೂ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ ಭುಯಾನ್ ಅವರ ಪೀಠವು ಸರಕಾರಕ್ಕೆ ನಿರ್ದೇಶನ ನೀಡಿದೆ.
ಶಾಸನಬದ್ಧ ನಿಬಂಧನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರದ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಎ.1,2022ರಿಂದಲೇ ಕಲಂ 162 ಜಾರಿಯಲ್ಲಿದ್ದರೂ ಸರಕಾರವು ತನ್ನದೇ ಆದ ಕಾನೂನಿನ ಪ್ರಕಾರ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನ್ಯಾಯಾಲಯವು ಹಿಂದೆ ಟೀಕಿಸಿತ್ತು.
ಯೋಜನೆಯ ಪ್ರಕಾರ ಪ್ರತಿ ಅಪಘಾತ ಗಾಯಾಳು ಅಪಘಾತ ಸಂಭವಿಸಿದ ದಿನಾಂಕದಿಂದ ಏಳು ದಿನಗಳವರೆಗೆ 1.5 ಲ.ರೂ.ವರೆಗಿನ ನಗದುರಹಿತ ಚಿಕಿತ್ಸೆಯನ್ನು ಪಡೆಯಲು ಅರ್ಹನಾಗಿರುತ್ತಾನೆ. ನಿಯೋಜಿತ ಆಸ್ಪತ್ರೆಗೆ ಗಾಯಾಳುವನ್ನು ತಂದ ತಕ್ಷಣ ಚಿಕಿತ್ಸೆಯನ್ನು ಒದಗಿಸಬೇಕು.
ಯೋಜನೆಯು ಈಗ ಮೇ 5,2025ರಿಂದ ಜಾರಿಗೆ ಬಂದಿದ್ದು,ಯೋಜನೆಗೆ ಆಕ್ಷೇಪಣೆಗಳನ್ನು ಸೂಕ್ತ ಹಂತದಲ್ಲಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಯೋಜನೆಯನ್ನು ಒಂದು ವಾರದೊಳಗೆ ಅಧಿಸೂಚಿಸಲಾಗುವುದು ಎಂದು ಕೇಂದ್ರವು ಎ.28ರಂದು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಹಿಂದಿನ ನಿರ್ದೇಶನಗಳನ್ನು ಪಾಲಿಸದ್ದಕ್ಕಾಗಿ ಸಮನ್ಸ್ ಜಾರಿಗೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರು. 2022,ಎ.1ರಿಂದಲೇ ಕಲಂ 162 ಜಾರಿಗೆ ಬಂದಿದ್ದರೂ ಯೋಜನೆಯನ್ನು ರೂಪಿಸುವಲ್ಲಿ ವಿಳಂಬಕ್ಕೆ ಕಾರಣವನ್ನು ವಿವರಿಸುವಂತೆ ಸವೋಚ್ಚ ನ್ಯಾಯಾಲಯವು ಕಾರ್ಯದರ್ಶಿಗೆ ಸೂಚಿಸಿತ್ತು.
ಚಿಕಿತ್ಸಾ ಯೋಜನೆಯ ಅನುಪಸ್ಥಿತಿಯಲ್ಲಿ ಜನರು ಹೆದ್ದಾರಿಗಳಲ್ಲಿ ಸಾಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದ ನ್ಯಾ.ಓಕಾ, ಮೂಲಭೂತ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳದೆ ಹೆದ್ದಾರಿಗಳನ್ನು ನಿರ್ಮಿಸುವ ಉದ್ದೇಶವನ್ನು ಪ್ರಶ್ನಿಸಿದ್ದರು. ಕರಡು ಯೋಜನೆಯನ್ನು ಸಿದ್ಧಗೊಳಿಸಲಾಗಿದೆ,ಆದರೆ ಸಾಮಾನ್ಯ ವಿಮಾ ಮಂಡಳಿ(ಜಿಐಸಿ)ಯು ಎತ್ತಿರುವ ಸಮಸ್ಯೆಗಳಿಂದಾಗಿ ಅಡೆತಡೆಯುಂಟಾಗಿದೆ ಎಂದು ಕಾರ್ಯದರ್ಶಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಜಿಐಸಿ ಸಹಕರಿಸದಿದ್ದರೆ ಬೇರೆ ಏಜೆನ್ಸಿಯನ್ನು ನೇಮಕ ಮಾಡುವಂತೆ ನ್ಯಾಯಾಲಯವು ನಿರ್ದೇಶನ ನೀಡಿದ್ದು, ಇದನ್ನು ಮಾಡಲಾಗುವುದು ಎಂದು ಕಾರ್ಯದರ್ಶಿ ಭರವಸೆ ನೀಡಿದ್ದರು.







