ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ನೆಹರೂ ಭಾವಚಿತ್ರ ತೆಗೆದು ಅಂಬೇಡ್ಕರ್ ಭಾವಚಿತ್ರ ಹಾಕಿದ ಸರಕಾರ
ಕಾಂಗ್ರೆಸ್ ಆಕ್ರೋಶ
Photo: NDTV
ಭೋಪಾಲ್ : ಮಧ್ಯ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೇರಿರುವ ಬಿಜೆಪಿ ಸರ್ಕಾರ ತನ್ನ ಮೊದಲ ವಿಧಾನಸಭಾ ಅಧಿವೇಶನದಲ್ಲೇ ವಿವಾದಕ್ಕೆ ಕಾರಣವಾಗಿದೆ. ವಿಧಾನಮಂಡಲದಲ್ಲಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ತೆಗೆದು ಅದರ ಸ್ಥಾನದಲ್ಲಿ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿರುವುದು ವಿಪಕ್ಷ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ಸಭಾಪತಿಗಳ ಸ್ಥಾನದ ಹಿಂದೆ ಅಕ್ಕಪಕ್ಕ ಗಾಂಧೀಜಿ ಮತ್ತು ನೆಹರೂ ಅವರ ಭಾವಚಿತ್ರಗಳಿದ್ದವು. ಈಗ ನೆಹರೂ ಅವರ ಭಾವಚಿತ್ರದ ಬದಲು ಅಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಲಾಗಿದೆ.
“ಇತಿಹಾಸವನ್ನು ಅಳಿಸಲು ಬಿಜೆಪಿ ಹಗಲು ರಾತ್ರಿ ಶ್ರಮಿಸುತ್ತಿದೆ, ನೆಹರೂ ಅವರ ಭಾವಚಿತ್ರ ತೆಗೆದುಹಾಕಿರುವುದು ಖಂಡನೀಯ,” ಎಂದು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಝ್ ಹೇಳಿದ್ದಾರೆ.
“ದಶಕಗಳಿಂದ ಸದನದಲ್ಲಿದ್ದ ದೇಶದ ಮೊದಲ ಪ್ರಧಾನಿಯ ಭಾವಚಿತ್ರವನ್ನು ತೆಗೆದುಹಾಕಿರುವುದು ಬಿಜೆಪಿಯ ಮನಃಸ್ಥಿತಿಯನ್ನು ಬಿಂಬಿಸುತ್ತದೆ,” ಎಂದು ಹಫೀಝ್ ಹೇಳಿದರು.
“ಭಾವಚಿತ್ರವನ್ನು ಪುನರ್ ಸ್ಥಾಪಿಸಬೇಕು ಇಲ್ಲದೇ ಇದ್ದರೆ ಅದೇ ಸ್ಥಳದಲ್ಲಿ ನೆಹರೂ ಅವರ ಭಾವಚಿತ್ರ ನಾವು ಹಾಕುತ್ತೇವೆ,” ಎಂದು ಅವರು ಹೇಳಿದರು.