ಇಂಡಿಯಾ ಮೈತ್ರಿಕೂಟದ ಸೀಟುಹಂಚಿಕೆ ಅಂತಿಮ; ಆರ್ಜೆಡಿಗೆ 135, ಕಾಂಗ್ರೆಸ್ಗೆ 61 ಸ್ಥಾನ

PC: ndtv
ಪಾಟ್ನಾ: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಬಿಹಾರ ವಿಧಾನಸಭಾ ಚುನಾವಣೆಗೆ ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ಅಂತಿಮ ಒಪ್ಪಂದಕ್ಕೆ ಬಂದಿದ್ದು, 144 ಸ್ಥಾನಗಳಿಗೆ ಪಟ್ಟುಹಿಡಿದಿದ್ದ ಆರ್ಜೆಡಿ ಅಂತಿಮವಾಗಿ 135 ಸ್ಥಾನಗಳಿಗೆ ಒಪ್ಪಿಕೊಂಡಿದೆ. 70 ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಒಟ್ಟು 243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಎಡಪಂಥೀಯ ಪಕ್ಷಗಳು 29-31 ಸ್ಥಾನಗಳನ್ನು ಪಡೆಯಲಿದ್ದು, ಮತ್ತು ಮುಕೇಶ್ ಸಾಹ್ನಿಯವರ ವಿಕಾಸಶೀಲ ಇಸಾನ್ ಪಕ್ಷ 16 ಸ್ಥಾನಗಳಲ್ಲಿ ಹುರಿಯಾಳುಗಳನ್ನು ಕಣಕ್ಕೆ ಇಳಿಸಲಿದೆ.
ಜತೆಗೆ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಕೂಡಾ ಪಕ್ಷಗಳು ಒಪ್ಪಿಕೊಂಡಿವೆ. ಆದರೆ ಯಾವುದೇ ಉಪ ಮುಖ್ಯಮಂತ್ರಿ ಮುಖಗಳನ್ನು ಹೆಸರಿಸುತ್ತಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಖಚಿತವಾಗಿ ಗೆಲುವಿನ ಸಾಧ್ಯತೆ ಇದೆ ಎನ್ನಲಾದ 70 ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವ ನಿರ್ಧಾರವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿತ್ತು ಹಾಗೂ ಈ ಬಗ್ಗೆ ಮೌನ ವಹಿಸಿತ್ತು. ಜಾರ್ಖಂಡ್ನಲ್ಲಿ ಮಿತ್ರಪಕ್ಷವಾಗಿರುವ ಜೆಎಂಎಂ ಹಾಗೂ ಐಪಿಪಿ ಪ್ರವೇಶದೊಂದಿಗೆ ಸಮಸ್ಯೆ ಮತ್ತಷ್ಟು ಜಟಿಲವಾಗಿತ್ತು. ಆರಂಭದಲ್ಲಿ ಆರ್ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ ಹಾಗೂ ವಿಐಪಿ ಮಾತ್ರ ಕೂಟದಲ್ಲಿದ್ದವು. ಹಿಂದುಳಿದ ವರ್ಗದ ಬೆಂಬಲ ಹೊಂದಿರುವ ಮುಖೇಶ್ ಸಾಹ್ನಿ 50 ಸ್ಥಾನಗಳಿಗೆ ಬೇಡಿಕೆ ಮಂಡಿಸಿದ್ದಲ್ಲದೇ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೂ ಆಗ್ರಹ ಮಂಡಿಸಿದ್ದರು. ಅಂತಿಮವಾಗಿ ಆರ್ಜೆಡಿ ತನ್ನ ಕೋಟಾದಿಂದ ಜೆಎಂಎಂಗೆ ಸ್ಥಾನಗಳನ್ನ ಬಿಟ್ಟುಕೊಡಲು ಮತತು ಕಾಂಗ್ರೆಸ್ಗೆ ಐಐಪಿಗೆ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ.







