ಭಾರತ-ಬಾಂಗ್ಲಾದೇಶ ನಡುವಿನ ಸುಮಾರು 864 ಕಿ.ಮೀ. ಗಡಿಯಲ್ಲಿನ್ನೂ ಬೇಲಿಯನ್ನು ನಿರ್ಮಿಸಲಾಗಿಲ್ಲ: ಕೇಂದ್ರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಭಾರತ ಮತ್ತು ಬಾಂಗ್ಲಾದೇಶ ನಡುವಿನ 4096.7 ಉದ್ದದ ಗಡಿಯ ಪೈಕಿ ಒಟ್ಟು 864.482 ಕಿ.ಮೀ.ಭಾಗಕ್ಕೆ ಇನ್ನೂ ಬೇಲಿಯನ್ನು ನಿರ್ಮಿಸಿಲ್ಲ.
ಮಂಗಳವಾರ ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಸಜ್ದಾ ಅಹ್ಮದ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿರುವ ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ನಿತ್ಯಾನಂದ ರಾಯ್ ಅವರು, ಒಟ್ಟು ಗಡಿಯ ಪೈಕಿ 174.514 ಕಿ.ಮೀ.ಭಾಗವು ‘ಕಾರ್ಯಸಾಧ್ಯವಲ್ಲದ ’ ಅಂತರವಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 4,096.7 ಕಿ.ಮೀ.ಗಡಿಯ ಪೈಕಿ 3,232.218 ಕಿ.ಮೀ.ಗಡಿಯಲ್ಲಿ ಈಗಾಗಲೇ ಬೇಲಿಯನ್ನು ನಿರ್ಮಿಸಲಾಗಿದೆ ಎಂದೂ ಅವರು ಹೇಳಿದರು.
ಭಾರತವು ದ್ವಿಪಕ್ಷೀಯ ಒಪ್ಪಂದವನ್ನು ಉಲ್ಲಂಘಿಸಿ ಗಡಿಯ ಐದು ಸ್ಥಳಗಳಲ್ಲಿ ಬೇಲಿಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಜ.12ರಂದು ಬಾಂಗ್ಲಾದೇಶವು ಆರೋಪಿಸಿದ ಬಳಿಕ ವಿವಾದ ಭುಗಿಲೆದ್ದಿತ್ತು. ಗಂಟೆಗಳ ಬಳಿಕ ಬಾಂಗ್ಲಾದೇಶಿ ವಿದೇಶಾಂಗ ಸಚಿವಾಲಯವು ಭಾರತೀಯ ರಾಯಭಾರಿ ಪ್ರಣಯ್ ವರ್ಮಾ ಅವರನ್ನು ಕರೆಸಿಕೊಂಡು ಗಡಿ ಉದ್ವಿಗ್ನತೆ ಕುರಿತು ಕಳವಳಗಳನ್ನು ಚರ್ಚಿಸಿತ್ತು.
ಜ.13ರಂದು ಬಾಂಗ್ಲಾದೇಶದ ಉಪ ರಾಯಭಾರಿ ನೂರುಲ್ ಇಸ್ಲಾಮ್ ಅವರನ್ನು ಕರೆಸಿಕೊಂಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಗಡಿಯಲ್ಲಿನ ಭದ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ಭಾರತವು ಬಾಂಗ್ಲಾದೇಶದ ಜೊತೆಗಿನ ಎಲ್ಲ ಶಿಷ್ಟಾಚಾರಗಳು ಮತ್ತು ಒಪ್ಪಂದಗಳನ್ನು ಅನುಸರಿಸಿದೆ ಎಂದು ತಿಳಿಸಿತ್ತು.
ಭೂ ಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಬಾಂಗ್ಲಾದೇಶದ ಗಡಿ ಕಾವಲು ಪಡೆಯಿಂದ ಆಕ್ಷೇಪಣೆಗಳು, ಸೀಮಿತ ಕಾಮಗಾರಿ ಅವಧಿ ಮತ್ತು ದುರ್ಗಮವಾದ ಭೂಪ್ರದೇಶ ಸೇರಿದಂತೆ ಹಲವಾರು ಸವಾಲುಗಳು ಬೇಲಿ ನಿರ್ಮಾಣವನ್ನು ಪೂರ್ಣಗೊಳಿಸುವುದನ್ನು ವಿಳಂಬಿಸಿವೆ ಎಂದು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದ ರಾಯ್, ಬೇಲಿ ನಿರ್ಮಾಣವು ಗಡಿಯಾಚೆಯ ಅಪರಾಧ ಚಟುವಟಿಕೆಗಳು, ಕಳ್ಳಸಾಗಣೆ, ಕ್ರಿಮಿನಲ್ಗಳ ಚಲನವಲನ ಮತ್ತು ಮಾನವ ಕಳ್ಳ ಸಾಗಣೆಯಂತಹ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಮೂಲಕ ಗಡಿಯನ್ನು ಅಪರಾಧ ಮುಕ್ತವಾಗಿಸಲು ನೆರವಾಗುತ್ತದೆ ಎಂದು ಹೇಳಿದರು.
ಭಾರತವು ಉಭಯ ಸರಕಾರಗಳ ನಡುವಿನ ಎಲ್ಲ ಶಿಷ್ಟಾಚಾರಗಳು ಮತ್ತು ಒಪ್ಪಂದಗಳನ್ನು ಪಾಲಿಸಿದೆ ಎಂದು ತಿಳಿಸಿದ ರಾಯ್,ಗಡಿಯಾಚೆಯ ಅಪರಾಧಗಳನ್ನು ಎದುರಿಸಲು ಬಾಂಗ್ಲಾದೇಶವೂ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಗೌರವಿಸುತ್ತದೆ ಮತ್ತು ಸಹಕಾರ ಧೋರಣೆಯನ್ನು ಕಾಯ್ದುಕೊಳ್ಳುತ್ತದೆ ಎಂದು ಭಾರತವು ನಿರೀಕ್ಷಿಸಿದೆ ಎಂದು ಹೇಳಿದರು.
ಸೌಜನ್ಯ : scroll.in