ಕೋಟಾ: ಐಐಟಿ-ಜೆಇಇ ಆಕಾಂಕ್ಷಿಯ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ | Photo: NDTV
ಕೋಟಾ: ಐಐಟಿ-ಜೆಇಇ ಆಕಾಂಕ್ಷಿಯಾಗಿರುವ 17 ವರ್ಷದ ವಿದ್ಯಾರ್ಥಿಯನ್ನು ಯುವಕರ ಗುಂಪೊಂದು ಇಲ್ಲಿನ ಇಂದಿರಾ ವಿಹಾರ್ ಪ್ರದೇಶದಲ್ಲಿ ಥಳಿಸಿ ಹತ್ಯೆಗೈದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತಪಟ್ಟ ವಿದ್ಯಾರ್ಥಿಯನ್ನು ಸತ್ಯವೀರ್ ಆಲಿಯಾಸ್ ರಾಜ್ವೀರ್ ಆಲಿಯಾಸ್ ರೋನಕ್ ಎಂದು ಗುರುತಿಸಲಾಗಿದೆ. ಈತ ಇಲ್ಲಿನ ತರಬೇತಿ ಕೇಂದ್ರವೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಐಐಟಿ-ಜೆಇಇಗೆ ತರಬೇತಿ ಪಡೆಯುತ್ತಿದ್ದ ಎಂದು ಅವರು ಹೇಳಿದ್ದಾರೆ.
ಸತ್ಯವೀರ್ ಸೋಮವಾರ ತಡ ಸಂಜೆ ಇಲ್ಲಿನ ಚಹಾದ ಅಗಂಡಿಯಲ್ಲಿ ಇದ್ದ ಸಂದರ್ಭ ತರಬೇತು ಕೇಂದ್ರದ ವಿದ್ಯಾರ್ಥಿಗಳು ಎಂದು ಹೇಳಲಾದ ಕೆಲವು ಯುವಕರ ಗುಂಪು ಕಬ್ಬಿಣದ ರಾಡ್ ಹಾಗೂ ಚೈನ್ ನಿಂದ ಆತನಿಗೆ ಹಲ್ಲೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಯಿಂದ ಗಾಯಗೊಂಡ ಸತ್ಯವೀರ್ ತನ್ನ ಕೊಠಡಿಗೆ ತೆರಳಿದ್ದ. ಆದರೆ, ತಡ ರಾತ್ರಿ ಆತನ ಆರೋಗ್ಯ ಹದಗೆಡಲು ಆರಂಭಿಸಿತು. ಕೂಡಲೇ ಸಹಪಾಠಿಗಳು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಅವರು ಹೇಳಿದ್ದಾರೆ.
ಕಬ್ಬಿಣದ ರಾಡ್ ಹಾಗೂ ಚೈನ್ ಗಳನ್ನು ಹಿಡಿದುಕೊಂಡ ಕೆಲವು ಯುವಕರು 17 ವರ್ಷದ ಬಾಲಕನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಾನು ನೋಡಿದ್ದೇನೆ. ಅವರು ಆಗಾಗ ಆತನ ಮೇಲೆ ದಾಳಿ ಮಾಡುತ್ತಿದ್ದರು ಎಂದು ಆ ಪ್ರದೇಶದ ಅಂಗಡಿ ಮಾಲಕನೋರ್ವ ಮಾಹಿತಿ ನೀಡಿದ್ದಾರೆ.
ಈ ಹತ್ಯೆ ಪ್ರಕರಣದಲ್ಲಿ ತರಬೇತು ಕೇಂದ್ರದ 7ರಿಂದ 8 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಭವಾನಿ ಸಿಂಗ್ ತಿಳಿಸಿದ್ದಾರೆ.
ಆದರೆ, ಈ ಹತ್ಯೆ ಹಿಂದಿನ ಕಾರಣ ತನಿಖೆಯಾದ ಬಳಿಕ ಹೊರಬರಲಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ವಿಚಾರಣೆ ನಡೆಯುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.