“ನನ್ನನ್ನು ಸಿಲುಕಿಸಲಾಗಿದೆ”: ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಛತ್ತೀಸಗಢ ಸಿಎಂ ಹೆಸರು ಉಲ್ಲೇಖಿಸಿದ್ದ ಆರೋಪಿಯಿಂದ ಈಡಿ ನಿರ್ದೇಶಕರಿಗೆ ಪತ್ರ
"ಅಧಿಕಾರಿಗಳು ಬಲವಂತದಿಂದ ಸಹಿ ಪಡೆದಿದ್ದಾರೆ"
ಭೂಪೇಶ್ ಬಘೆಲ್ (PTI)
ಹೊಸದಿಲ್ಲಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ರೂ. 508 ಕೋಟಿಯನ್ನು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಅಸೀಮ್ ದಾಸ್ ಎಂಬಾತನಿಂದ ಪಡೆದಿದ್ದಾರೆಂದು ಆರೋಪಿಸಿ, ದಾಸ್ ನನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಆತ ಈಗ ತನ್ನ ಹೇಳಿಕೆ ಬದಲಿಸಿ ತಾನು ಯಾವತ್ತೂ ರಾಜಕಾರಣಿಗಳಿಗೆ ನಗದು ನೀಡಿಲ್ಲ ಹಾಗೂ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾನೆ.
ಛತ್ತೀಸಗಢ ಸಿಎಂಗೆ ಹಣ ಪಾವತಿ ಕುರಿತು ತಾನು ಆರೋಪ ಮಾಡಿಲ್ಲ ಎಂದು ಆತ ಹೇಳಿದ್ದಾನೆ. ಈ ಕುರಿತು ಆತ ಜೈಲಿನಿಂದಲೇ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದಾನೆ. ಅಧಿಕಾರಿಗಳು ಇಂಗ್ಲಿಷ್ನಲ್ಲಿ ಬರೆಯಲಾದ ಹೇಳಿಕೆಯೊಂದಕ್ಕೆ ತನ್ನಿಂದ ಬಲವಂತದಿಂದ ಸಹಿ ಪಡೆದಿದ್ದಾರೆ. ತನಗೆ ಇಂಗ್ಲಿಷ್ ಬರುವುದಿಲ್ಲ ಎಂದು ಆತ ತನ್ನ ಪತ್ರದಲ್ಲಿ ಹೇಳಿದ್ದಾನೆ.
ಈ ಆಕ್ರಮ ಆ್ಯಪ್ ನ ಹಿಂದಿನ ವ್ಯಕ್ತಿ ಶುಭಂ ಸೋನಿ ತನ್ನ ಬಾಲ್ಯದ ಗೆಳೆಯ, ಆತನ ಒತ್ತಾಯದ ಮೇರೆಗೆ ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಎರಡು ಬಾರಿ ದುಬೈಗೆ ಭೇಟಿ ನೀಡಿದ್ದಾಗಿ ಆತ ಹೇಳಿದ್ದಾನೆ.
ಸೋನಿಗೆ ಛತ್ತೀಸಗಢದಲ್ಲಿ ನಿರ್ಮಾಣ ಕ್ಷೇತ್ರದ ವ್ಯವಹಾರ ನಡೆಸುವ ಆಸಕ್ತಿಯಿತ್ತು, ಅದಕ್ಕಾಗಿ ಕೆಲಸ ಮಾಡುವಂತೆ ತನ್ನನ್ನು ಕೇಳಿದ್ದ ಹಾಗೂ ಹಣಕಾಸಿನ ವ್ಯವಸ್ಥೆಯ ಬಗ್ಗೆಯೂ ಆಶ್ವಾಸನೆ ನೀಡಿದ್ದ ಎಂದು ಸೋನಿ ತನ್ನ ಪತ್ರದಲ್ಲಿ ಹೇಳಿದ್ದಾನೆ.
“ನಾನು ರಾಯಪುರ್ ವಿಮಾನ ನಿಲ್ದಾಣ ತಲುಪಿದಾಗ, ನನಗೆ ಕಾರೊಂದರಲ್ಲಿ ವಿಐಪಿ ರಸ್ತೆಯಲ್ಲಿರುವ ಹೋಟೆಲ್ಗೆ ಹೋಗುವಂತೆ ತಿಳಿಸಲಾಗಿತ್ತು. ಕಾರನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸುವಂತೆ ಸೂಚಿಸಲಾಯಿತು ಅಲ್ಲಿ ಒಬ್ಬ ವ್ಯಕ್ತಿ ನಗದು ತುಂಬಿದ ಚೀಲಗಳನ್ನು ಕಾರಿನಲ್ಲಿರಿಸಿರಿಸಿದ್ದಾರೆ, ಹೋಟೆಲ್ ಕೊಠಡಿಗೆ ತೆರಳುವಂತೆ ನನಗೆ ನಂತರ ಫೋನ್ ಮೂಲಕ ಸೂಚಿಸಲಾಯಿತು. ಸ್ವಲ್ಪ ಹೊತ್ತಿನಲ್ಲಿ ಈಡಿ ಅಧಿಕಾರಿಗಳು ನನ್ನ ಕೊಠಡಿಗೆ ಬಂದು ನನ್ನನ್ನು ಕರೆದುಕೊಂಡು ಹೋದರು. ನನ್ನನ್ನು ಸಿಲುಕಿಸಲಾಗಿದೆ ಎಂದು ನಂತರ ನನಗೆ ತಿಳಿಯಿತು. ನಾನು ಯಾರಿಗೂ ಹಣಕಾಸಿನ ಸಹಾಯ ಮಾಡಿಲ್ಲ ಅಥವಾ ಯಾವುದೇ ರಾಜಕೀಯ ಮುಖಂಡರು ಅಥವಾ ಕಾರ್ಯಕರ್ತರಿಗೆ ಹಣ ನೀಡಿಲ್ಲ,” ಎಂದು ದಾಸ್ ತನ್ನ ಪತ್ರದಲ್ಲಿ ತಿಳಿಸಿದ್ದಾನೆ.