ಮೈತೈ ಬಂಡುಕೋರ ಗುಂಪುಗಳ ನಿಷೇಧ ಪರಿಶೀಲನೆಗೆ ನ್ಯಾಯಮಂಡಳಿ ರಚಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮಣಿಪುರದಲ್ಲಿರುವ ಹಲವಾರು ಮೆತೈ ಬಂಡುಕೋರ ಗುಂಪುಗಳನ್ನು ‘ಕಾನೂನುಬಾಹಿರ ಸಂಘಟನೆಗಳು’ ಎಂಬುದಾಗಿ ಘೋಷಿಸಲು ಸಾಕಷ್ಟು ಕಾರಣಗಳಿವೆಯೇ ಎಂದು ನಿರ್ಧರಿಸಲು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಕಾನೂನುಬಾಹಿರ ಚಟುವಟಿಕೆಗಳ ನ್ಯಾಯಮಂಡಳಿಯನ್ನು ಸ್ಥಾಪಿಸಿದೆ.
ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ನ್ಯಾಯಮಂಡಳಿಯ ಮುಖ್ಯಸ್ಥರಾಗಿರುತ್ತಾರೆ.
ನವೆಂಬರ್ 13ರಂದು, ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಹಲವಾರು ಮೆತೈ ಬಂಡುಕೋರ ಸಂಘಟನೆಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಐದು ವರ್ಷಗಳವರೆಗೆ ವಿಸ್ತರಿಸಿತ್ತು. ಸಶಸ್ತ್ರ ಸಂಘರ್ಷದ ಮೂಲಕ ಮಣಿಪುರವನ್ನು ವಿಭಜಿಸಲು ಮುಂದಾಗಿರುವುದಕ್ಕಾಗಿ ಅದು ಈ ಕ್ರಮ ತೆಗೆದುಕೊಂಡಿತ್ತು.
ಮಂಗಳವಾರ ಮತ್ತು ನವೆಂಬರ್ 13ರಂದು ಕೇಂದ್ರ ಸರಕಾರ ಹೊರಡಿಸಿರುವ ಗಝೆಟ್ ಅಧಿಸೂಚನೆಗಳು, ಈ ಎಲ್ಲಾ ಬಂಡುಕೋರ ಗುಂಪುಗಳನ್ನು ಸಾಮೂಹಿಕವಾಗಿ ‘ಮೆತೈ ಉಗ್ರವಾದಿ ಸಂಘಟನೆಗಳು’’ ಎಂಬುದಾಗಿ ಬಣ್ಣಿಸಿವೆ.
ಈ ಬಂಡುಕೋರ ಗುಂಪುಗಳ ಹೆಸರುಗಳು ಹೀಗಿವೆ: ಪೀಪಲ್ಸ್ ಲಿಬರೇಶನ್ ಆರ್ಮಿ ಮತ್ತು ಅದರ ರಾಜಕೀಯ ಘಟಕ, ರೆವಲೂಶನರಿ ಪೀಪಲ್ಸ್ ಫ್ರಂಟ್, ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ಮತ್ತು ಅದರ ಸಶಸ್ತ್ರ ಘಟಕ, ಮಣಿಪುರ ಪೀಪಲ್ಸ್ ಆರ್ಮಿ, ಪೀಪಲ್ಸ್ ರೆವಲೂಶನರಿ ಪಾರ್ಟಿ ಆಫ್ ಕಾಂಗ್ಲೇಪಾಕ್ ಮತ್ತು ಅದರ ಸಶಸ್ತ್ರ ಘಟಕ, ರೆಡ್ ಆರ್ಮಿ, ಕಾಂಗ್ಲೇಪಾಕ್ ಕಮ್ಯುನಿಸ್ಟ್ ಪಾರ್ಟಿ ಮತ್ತು ಅದರ ಸಶಸ್ತ್ರ ಘಟಕ, ಕಾಂಗ್ಲೇ ಯಾವೊಲ್ ಕಂಬ ಲುಪ್ ಮತ್ತು ಕೋಆರ್ಡಿನೇಶನ್ ಕಮಿಟಿ ಆ್ಯಂಡ್ ದ ಅಲಯನ್ಸ್ ಫಾರ್ ಸೋಶಿಯಲಿಸ್ಟ್ ಯೂನಿಟಿ ಕಾಂಗ್ಲೇಪಾಕ್.