ಮಿಚಾಂಗ್ ಚಂಡಮಾರುತ: ಸಾವಿನ ಸಂಖ್ಯೆ 27ಕ್ಕೆ ಏರಿಕೆ
Photo: twitter.com/IndiaCoastGuard
ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಕರಾವಳಿ ತತ್ತರಿಸಿದ್ದು, ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ. ವ್ಯಾಪಕ ಮಳೆ ಮತ್ತು 100 ಕಿಲೋಮೀಟರ್ ವೇಗದ ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಆಂಧ್ರಪ್ರದೇಶದ ಬಾಪಟ್ಲಾದಲ್ಲಿ ಮಂಗಳವಾರ ಮಧ್ಯಾಹ್ನ ಭೂಸ್ಪರ್ಶದ ಬಳಿಕ ಬಂಗಾಳಕೊಲ್ಲಿಯ ಪೂರ್ವ ಕರಾವಳಿಯಲ್ಲಿ ಉತ್ತರಾಭಿಮುಖವಾಗಿ ಬಿರುಗಾಳಿ ಬೀಸುತ್ತಿದೆ. ಆಂಧ್ರಪ್ರದೇಶದಲ್ಲಿ ಐದು ಮಂದಿ ಮೃತಪಟ್ಟಿದ್ದು, ತೆಲಂಗಾಣದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ಮಂದಿ ಮೃತಪಟ್ಟಿದ್ದು, ಮುಳುಗಿದ ಮನೆಗಳ ಅವಶೇಷಗಳಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ.
ಚಂಡಮಾರುತ ಹಾಗೂ ಧಾರಾಕಾರ ಮಳೆಯಿಂದ ಆಂಧ್ರದಲ್ಲಿ ಬೆಳೆದುನಿಂತ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಕಡಪಾ ಜಿಲ್ಲೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸ್ ಪೇದೆ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಮೇಲೆ ಮರ ಉರುಳಿ ಅವರು ಸ್ಥಳದಲ್ಲೇ ಮೃತಪಟ್ಟರು.
ಚೆನ್ನೈನಲ್ಲಿ ಬಹುತೇಕ ಕಡೆಗಳಲ್ಲಿ ನೀರು ನಿಂತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆದರೆ ಮಳೆ ಕಡಿಮೆಯಾಗಿರುವುದರಿಂದ ಜನ ಸ್ವಲ್ಪಮಟ್ಟಿಗೆ ನಿರಾಳವಾಗಿದ್ದಾರೆ. ಆದರೆ ಪ್ರವಾಹ ಸಂಬಂಧಿ ಸವಾಲುಗಳಿಂದ ಮಹಾನಗರ ಕಂಗೆಟ್ಟಿದ್ದು, ಮುಳುಗಿದ ಮನೆಗಳಲ್ಲಿ ಮೃತದೇಹಗಳು ಪತ್ತೆಯಾಗುತ್ತಿವೆ. ಜಲಾವೃತ ಪ್ರದೇಶಗಳಿಂದ ಹಲವು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.