ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ಪರೇಡ್ ನ ಕೇಂದ್ರಬಿಂದುವಾದ ʼನಾರಿ ಶಕ್ತಿ’
ಪರೇಡ್ ವೀಕ್ಷಿಸಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ScreengrabX/: ANI
ಹೊಸದಿಲ್ಲಿ: 75ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತವು ಭಾರತದ ಸೇನಾ ಶಕ್ತಿ, ಭಾರತದ ವೈವಿಧ್ಯಮಯ ಸಂಸ್ಕತಿಯೊಂದಿಗೆ ವಿಶೇಷವಾಗಿ ನಾರಿ ಶಕ್ತಿಯ ಸಬಲೀಕರಣವನ್ನು ಪ್ರದರ್ಶಿಸಿತು.
ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಪಾಲ್ಗೊಂಡಿದ್ದು, ಅವರೊಂದಿಗೆ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆಯಾಗಿದ್ದಾರೆ.
ಗಣರಾಜ್ಯೋತ್ಸವದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಭಾರತದ ಮೂರೂ ಸೇನಾ ಪಡೆಯಿಂದ ಸಂಪೂರ್ಣ ಮಹಿಳೆಯರೇ ಇರುವ ತುಕಡಿಗಳು ಪರೇಡ್ ನಲ್ಲಿ ಭಾಗವಹಿಸಿವೆ. ಭಾರತೀಯ ವಾಯು ಪಡೆಯು ವಿಮಾನ ಹಾರಾಟವನ್ನು 15 ಮಂದಿ ಮಹಿಳಾ ಪೈಲಟ್ ಗಳು ಪ್ರದರ್ಶಿಸಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯು ತುಕಡಿಯೂ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಂಡಿತ್ತು.
ಪರೇಡ್ ಸಂದರ್ಭದಲ್ಲಿ 100ಕ್ಕೂ ಹೆಚ್ಚು ಮಹಿಳಾ ಕಲಾವಿದರು ಸಾಂಪ್ರದಾಯಿಕ ಸೇನಾ ಬ್ಯಾಂಡ್ ಬದಲು ಭಾರತೀಯ ಸಂಗೀತ ವಾದ್ಯಗಳಾದ ಶಂಖ, ನಾದಸ್ವರ ಹಾಗೂ ನಾಗಡವನ್ನು ನುಡಿಸಿದರು.
ಭಾರತದ ಸಶಸ್ತ್ರ ಪಡೆಗಳು ಸ್ವದೇಶಿ ನಿರ್ಮಿತ ಕ್ಷಿಪಣಿಗಳು, ಡ್ರೋನ್, ಜಾಮರ್ ಗಳು ಹಾಗೂ ನಿಗಾ ವ್ಯವಸ್ಥೆಗಳು, ವಾಹನ ಚಾಲಿತ ತೋಪುಗಳು ಹಾಗೂ ಬಿಎಂಪಿ-II ಇನ್ ಫ್ಯಾಂಟ್ರಿ ಯುದ್ಧ ವಾಹನಗಳು ಸೇರಿದಂತೆ ಸೇನಾ ಸಾಧನಗಳನ್ನು ಪ್ರದರ್ಶಿಸಿದವು.
ಪ್ರಧಾನಿ ನರೇಂದ್ರ ಮೋದಿ ಸೇನಾ ಸ್ಮಾರಕಕ್ಕೆ ಗೌರವ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿ ಎಮಾನ್ಯುಯೆಲ್ ಮ್ಯಾಕ್ರನ್ ಪರೇಡ್ ನ ಗೌರವ ವಂದನೆಯನ್ನು ಸ್ವೀಕರಿಸಿದರು. ಗಣರಾಜ್ಯೋತ್ಸವ ಪರೇಡ್ ಗೆ ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಾಯಿತು.
#WATCH | India's 'Nari Shakti' on display as women soldiers march down the Kartavya Path on the 75th Republic Day pic.twitter.com/9HK3Q0otGo
— ANI (@ANI) January 26, 2024