ರಾಜಸ್ಥಾನ ಕಾಂಗ್ರೆಸ್ ಮುಖಂಡನ ಪತ್ನಿ ರಸ್ತೆ ಅಪಘಾತದಲ್ಲಿ ಮೃತ್ಯು
Photo: NDtv
ಜೈಪುರ: ಬಿಜೆಪಿ ಧುರೀಣ ಜಸ್ವಂತ್ ಸಿಂಗ್ ಅವರ ಪುತ್ರ, ಮಾಜಿ ಸಂಸದ ಮನ್ವೇಂದ್ರ ಸಿಂಗ್ ಜಸೋಲ್ ಅವರ ಪತ್ನಿ ರಾಜಸ್ಥಾನದ ಅಲ್ವಾರ್ ನಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ವಾಹನದಲ್ಲಿ ಸಿಂಗ್ ಹಾಗೂ ಅವರ ಮಗ ಕೂಡಾ ಇದ್ದರು. ಇಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ಹೈವೇಯಲ್ಲಿ ಖುಷ್ ಪುರಿ ಗ್ರಾಮದ ಸಮೀಪ ನಡೆದ ಅಪಘಾತದಲ್ಲಿ ಮಾಜಿ ಸಂಸದರ ಪತ್ನಿ ಚಿತ್ರಾ ಸಿಂಗ್ ಮೃತಪಟ್ಟಿದ್ದಾರೆ. ಮನ್ವೇಂದ್ರ ಸಿಂಗ್ ಮತ್ತು ಮಗ ಸೋಲಂಕಿ ಸಿಂಗ್, ಚಾಲಕನಿಗೆ ಕೂಡಾ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಗಾಯಾಳುಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ. ಸಿಂಗ್ ಅವರ ಎದೆಗೆ ಗಾಯಗಳಾಗಿದ್ದು, ಪಕ್ಕೆಲುಬು ಮುರಿದಿದೆ ಎಂದು ಸೋಲಂಕಿ ಆಸ್ಪತ್ರೆಯ ವೈದ್ಯ ಜಿ.ಎಸ್.ಸೋಲಂಕಿ ಸ್ಪಷ್ಟಪಡಿಸಿದ್ದಾರೆ. ಸಂಜೆ 6ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಚಿತ್ರಾಸಿಂಗ್ ಸ್ಥಳದಲ್ಲೇ ಅಸು ನೀಗಿದ್ದಾರೆ. ಚಿತ್ರಾ ಸಿಂಗ್ ನಿಧನಕ್ಕೆ ರಾಜಸ್ಥಾನದ ಮಾಜಿ ಸಿಎಂ ವಸುಂಧರ ರಾಜೇ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.