ಆದಿತ್ಯನಾಥ್, ಮಹಾ ಕುಂಭ ಮೇಳದ ಕುರಿತು ಆಕ್ಷೇಪಾರ್ಹ ಹೇಳಿಕೆ ; ಎಸ್ಪಿ ನಾಯಕ ಸುಲ್ತಾನ್ ಬೇಗ್ ವಿರುದ್ಧ ಪ್ರಕರಣ ದಾಖಲು

ಯೋಗಿ ಆದಿತ್ಯನಾಥ್, ಸುಲ್ತಾನ್ ಬೇಗ್ | PC : X
ಬರೇಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಹಾ ಕುಂಭ ಮೇಳದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರಪ್ರದೇಶದ ಮಾಜಿ ಶಾಸಕ ಸುಲ್ತಾನ್ ಬೇಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಿಜೆಪಿ ನಾಯಕ ವಿರ್ಪಲ್ ಸಿಂಗ್ ಮಂಗಳವಾರ ನೀಡಿದ ದೂರಿನ ಆಧಾರದಲ್ಲಿ ಶೇರ್ಗಢ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೇಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353, 299ರ ಅಡಿಯಲ್ಲಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ಅರುಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ವೀಡಿಯೊ ಆದಿತ್ಯನಾಥ್ ಸರಕಾರವನ್ನು ಟೀಕಿಸುತ್ತಾ, ಮಹಾ ಕುಂಭ ಮೇಳ ಸ್ಮಶಾನವಾಗಿ ಪರಿವರ್ತಿತವಾಗಿದೆ ಎಂದು ಬೇಗ್ ಹೇಳುವುದನ್ನು ತೋರಿಸುವ ಉದ್ದೇಶ ಹೊಂದಿತ್ತು ಎಂದು ಆರೋಪಿಸಲಾಗಿದೆ.
ಹಲವು ಜನರು ಸಾವನ್ನಪ್ಪಲು ಕಾರಣವಾದ ಕಾಲ್ತುಳಿತ ಹಾಗೂ ಅಗ್ನಿ ಅವಘಡ ಸಂಭವಿಸಲು ಸರಕಾರದ ನಿರ್ಲಕ್ಷ್ಯ ಹಾಗೂ ತಪ್ಪು ನಿರ್ವಹಣೆ ಕಾರಣ ಎಂದು ಬೇಗ್ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ.
ವೀಡಿಯೊವನ್ನು ಪೊಲೀಸರು ಗಮನಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಪುರಾವೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಲ್ ಅಧಿಕಾರಿ ಸಿಂಗ್ ತಿಳಿಸಿದ್ದಾರೆ.
ಅವರ ವಿರುದ್ಧ ದಾಖಲಾದ ಎಫ್ಐಆರ್ ಕುರಿತು ಬೇಗ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.