ಪಂಜಾಬ್| ಪೊಲೀಸರ ಮೇಲೆ ನಿಹಾಂಗ್ ಸಿಖ್ ದಾಳಿ: ಓರ್ವ ಸಾವು, ಮೂವರಿಗೆ ಗಾಯ
Photo: ANI
ಕಪುರ್ತಲಾ: ಪಂಜಾಬ್ನ ಕಪುರ್ತಲಾದಲ್ಲಿನ ಗುರುದ್ವಾರವೊಂದರಲ್ಲಿ ನಿಹಾಂಗ್ ಸಿಖ್ಖ ರ ಒಂದು ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ. ಗುರುದ್ವಾರದ ಮಾಲಕತ್ವದ ವಿಚಾರದಲ್ಲಿನ ಸಂಘರ್ಷವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುದ್ವಾರವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ನಿಹಾಂಗ್ ಪಂಥದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಈ ಕಾರ್ಯಾಚರಣೆ ವೇಳೆ ಓರ್ವ ನಿಹಾಂಗ್ ಸಿಖ್ ಪೊಲೀಸರತ್ತ ಗುಂಡು ಹಾರಿಸಿದಾಗ ಈ ಘಟನೆ ಸಂಭವಿಸಿದ್ದು ಆ ವೇಳೆ ಪೊಲೀಸರು ರಸ್ತೆಯಲ್ಲಿದ್ದರು.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಕನಿಷ್ಠ 30 ನಿಹಾಂಗ್ ಸಿಖ್ಖರು ಇನ್ನೂ ಗುರುದ್ವಾರದೊಳಗೆ ಇರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಬಾ ಬುದ್ಧ ದಳದ ಮುಖ್ಯಸ್ಥ ಬಾಬಾ ಬಲವೀರ್ ಸಿಂಗ್ ಈ ಗುರುದ್ವಾರದ ಮುಂಭಾಗವನ್ನು ಆಕ್ರಮಿಸಿಕೊಂಡಿದ್ದು ಅಲ್ಲಿ ಆತನ ಸಹಚರರಾದ ನಿರ್ವೈರ್ ಸಿಂಗ್ ಮತ್ತು ಜಗಜಿತ್ ಸಿಂಗ್ ಕೂಡ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 21ರಂದು ಬಾಬಾ ಬುದ್ಧ ದಳದ ಇನ್ನೊಂದು ಬಣದ ಬಾಬಾ ಮಾನ್ ಸಿಂಗ್ ವಲ್ಲೋ ಮತ್ತಾತನ 15-20 ಸಹಚರರು ಗುರುದ್ವಾರದೊಳಗೆ ಬಲವಂತದಿಂದ ಪ್ರವೇಶಿಸಿ ಅಲ್ಲಿದ್ದ ನಿರ್ವೈರ್ ಸಿಂಗ್ ಅನ್ನು ಹಗ್ಗದಿಂದ ಕಟ್ಟಿ ಹಾಕಿ ಜಗಜಿತ್ ಸಿಂಗ್ ಮೇಲೆ ದಾಳಿ ನಡೆಸಿದ್ದರು.
ಸುಲ್ತಾನಪುರ್ ಲೋಧಿ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಾಬಾ ಮಾನ್ ಸಿಂಗ್ ಗುಂಪಿನ ಹತ್ತು ಮಂದಿಯನ್ನು ಬಂಧಿಸಿದ ನಂತರ ಈ ಗುಂಡಿನ ದಾಳಿ ನಡೆದಿತ್ತು.